ಜಿಲ್ಲೆ

ಉಡುಪಿಯಲ್ಲಿ ರಾಯರ ಆರಾಧನೆ ಸಂಭ್ರಮ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಥಬೀದಿಯಲ್ಲಿರುವ ರಾಘವೇಂದ್ರಸ್ವಾಮಿಗಳ ಮಠ ಸೇರಿದಂತೆ ಜಿಲ್ಲೆಯಾದ್ಯಂತ ರಾಯರ ಮಠಗಳಲ್ಲಿ ಮಧ್ಯಾರಾಧನೆ ಸಂಭ್ರಮದಿಂದ ನಡೆಯಿತು.

ಶ್ರೀಕೃಷ್ಣಮಠದ ಮುಂಭಾಗದಲ್ಲಿರುವ ಶ್ರೀರಾಘವೇ೦ದ್ರ ಮಠದಲ್ಲಿ ಶುಕ್ರವಾರ ಆರ೦ಭಗೊ೦ಡಿದ್ದು, ಶನಿವಾರ ಮಧ್ಯ ರಾಧನೆ ಪ್ರಯುಕ್ತ ರಥೋತ್ಸವ ನೆರವೇರಿತು.

ಪಲ್ಲಕ್ಕಿಯಲ್ಲಿ  ಪ್ರಹಲ್ಲಾದ ರಾಜರ ಮೂರ್ತಿಯನ್ನಿಟ್ಟು ಮಠದ ಒಳಭಾಗದಲ್ಲಿ ಒಂದು ಸುತ್ತು ಪ್ರದಕ್ಷಿಣಿ ಬಂದು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಆರತಿಯನ್ನು ಬೆಳಗಿಸಿದರು. ನಂತರ ರಥಬೀದಿಯಲ್ಲಿ ಉತ್ಸವವು ನೆರವೇರಿಸಲಾಯಿತು. ಸಾವಿರಾರು ಮಂದಿ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚರ್ಯರ  ಅಂಬಲಪಾಡಿಯ ಈಶಾವಾಸ್ಯಂನ ಶ್ರೀರಾಘವೇಂದ್ರ ಗುರುಸಾರ್ವಭೌಮರ ವೃಂದಾವನ ಸನ್ನಿಧಿಯಲ್ಲಿ ಶೀ ಗುರುರಾಯರ ಆರಾಧನೋತ್ಸವದ ಅಂಗವಾಗಿ ಶನಿವಾರ ವಿಶೇಷ ಪೂಜೆ  ನೆರವೇರಿತು .‌ ವಿದ್ವಾನ್ ಹೆರ್ಗ ಹರಿಪ್ರಸಾದ ಭಟ್ಟರು
ಕಾಮಧೇನು ಶ್ರೀರಾಘವೇಂದ್ರ ಸ್ವಾಮಿಗಳು ಎಂಬ ಶೀರ್ಷಿಕೆಯಲ್ಲಿ ರಾಯರ ಮಹಿಮೆಗಳ ಕುರಿತು ಉಪನ್ಯಾಸ ನಡೆಸಿಕೊಟ್ಟರು .‌

ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠ, ಪಾದೆಬೆಟ್ಟು, ಉಚ್ಚಿಲ, ಕಂಚಿನಡ್ಕ, ಬೈಂದೂರು ಒತ್ತಿನಣೆ, ಕಳತ್ತೂರು ಮುಖ್ಯಪ್ರಾಣ ರಾಘವೇಂದ್ರ ಮಠದಲ್ಲಿ ರಾಯರ ಆರಾಧನೆ ವಿಜೃಂಭಣೆಯಿಂದ ನಡೆಯಿತು. ನೂರಾರು ಮಂದಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.