ಜಿಲ್ಲೆ

ಪ್ರಕೃತಿಗೆ ಹತ್ತಿರವಾಗಿ ಬದುಕಿದಾಗ ಜೀವನ ಸಾರ್ಥಕ: ಅದಮಾರು ಶ್ರೀ

ಉಡುಪಿ: ಸಂತೋಷ ವಸ್ತುಗಳಿಂದ ದೊರಕುವುದಿಲ್ಲ. ಪ್ರಕೃತಿಗೆ ಹತ್ತಿರವಾಗಿ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿ ವಸ್ತುಗಳನ್ನು ದೈನಂದಿನ ಬದುಕಿನಲ್ಲಿ ಉಪಯೋಗ ಮಾಡಬೇಕು ಎಂದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಪ್ರಾಚಿ ಫೌಂಡೇಶನ್, ಆನಂದ ತುಳಸೀವನ ಟ್ರಸ್ಟ್ ಮತ್ತು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ನಡೆದ ನಮ್ಮೂರ ಕರಕುಶಲಕರ್ಮಿಗಳ ಮೇಳದಲ್ಲಿ ಬಿಸು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ನಗರಕ್ಕೆ ವಲಸೆ ಹೋಗುವವ ಸಂಖ್ಯೆ ಇದೇ ರೀತಿ ಮುಂದುವರಿದರೆ ಇನ್ನು 10 ರಿಂದ 20 ವರ್ಷದಲ್ಲಿ ಊರಿಗೆ ಊರೇ ಖಾಲಿಯಾಗುವ ಪರಿಸ್ಥಿತಿ ಬರಬಹುದು. ಇದರಿಂದ ನಮ್ಮ ದೇಶೀಯ ಸಂಸ್ಕೃತಿ ನಶಿಸಿ ಹೋಗಲಿದೆ. ಆಯಾ ಊರಿನಲ್ಲಿ ನೂರಾರು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದ ಸಂಪ್ರದಾಯ, ಕಲೆಗಳು ಅವನತಿ ಹೊಂದಲಿವೆ. ಹೀಗಾಗಿ ನಮ್ಮತನ ಉಳಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ದೊರಯುವ ವಸ್ತುಗಳಿಗೆ ಆದ್ಯತೆ ನೀಡಬೇಕು. ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಬಿ.ವಿ.ಕೆ ಮಣಿಪಾಲದ ಹಿರಿಯ ನಿರ್ದೇಶಕ ಜಗದೀಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಗೌರವ ಆಡಳಿತಾಧಿಕಾರಿ ಡಾ. ಎ.ಪಿ. ಭಟ್, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಪ್ರಾಚಿ ಫೌಂಡೇಶನ್ನಿನ ಟ್ರಸ್ಟಿ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮದ್ದಲೆ ತಯಾರಕರಾದ ಕಾಸರಗೋಡು ವೆಂಕಟರಮಣ ದಂಪತಿ, ಮಡಕೆ ತಯಾರಕರಾದ ಲೀಲಾ ವರಂಗ ದಂಪತಿ ಹಾಗೂ ಕಡೆಗೋಲು ತಯಾರಕ ಕೆರ್ವಾಶೆ ಸದಾನಂದ ಗುಡಿಗಾರ್ ಅವರಿಗೆ ಬಿಸು ಪ್ರಶಸ್ತಿ ಪ್ರದಾನ ಮಾಡಲಾಯಿತು.