ಜಿಲ್ಲೆ

ಉಡುಪಿಯಲ್ಲಿ ಸಿಂಗಾರಗೊಳ್ಳುತ್ತಿರುವ ಮಾದರಿ ಮತಗಟ್ಟೆಗಳು

ಗೋಪಾಲಕೃಷ್ಣ ಪಾದೂರ್

ಉಡುಪಿ: ಇನ್ನೇನು ತಿಂಗಳು ಕಳೆಯುವ ಮುನ್ನ ರಾಜ್ಯ ವಿಧಾನಸಭಾ ಚುನಾವಣೆ ಕಾವು ರಂಗೇರಲಿದ್ದು, ಜಿಲ್ಲಾಡಳಿತ ಪೂರ್ವಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸ್ವೀಪ್ ಸಮಿತಿ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತಿದ್ದು, ಪ್ರಥಮ ಹಂತದಲ್ಲಿ ಮತಗಟ್ಟೆಗಳು ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿವೆ. ಮತದಾರರನ್ನು ಮತದಾನ ಕೇಂದ್ರಗಳತ್ತ ಆಕರ್ಷಿಸಲು ಸಜ್ಜಾಗಿವೆ.

ಪ್ರಾಯೋಗಿಕವಾಗಿ ಇತ್ತೀಚೆಗೆ ಉಡುಪಿ ಹನುಮಂತನಗರ ಶಾಲೆಯಲ್ಲಿನ 5 ಮತಗಟ್ಟೆಗಳನ್ನು, 30ಕ್ಕೂ ಅಧಿಕ ಚಿತ್ರಕಲಾ ಶಿಕ್ಷಕರು ಒಂದೇ ದಿನದಲ್ಲಿ ಚಿತ್ರಕಲೆಯ ಮೂಲಕ ಸಿಂಗರಿಸಿದ್ದು, ಇದು ನೋಡುಗರ ಕಣ್ಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಮೂಲಕ ಎಲ್ಲಾ 1111 ಮತಗಟ್ಟೆಗಳಲ್ಲಿ ಯಕ್ಷಗಾನ, ಕಂಬಳ, ಉಡುಪಿ ಸೀರೆ, ವರ್ಲಿ ಚಿತ್ರಕಲೆ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಚಿತ್ರಗಳನ್ನು ರಚಿಸಲಾಗುತ್ತದೆ.

ಕೇಂದ್ರ ಚುನಾವಣಾ ಆಯೋಗವು ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲು ಕರೆ ನೀಡಿದ್ದು, ಮತದಾನದ ದಿನದಂದು ಮತಗಟ್ಟೆಗಳನ್ನು ಆಕರ್ಷಕ ರೀತಿಯಲ್ಲಿ ಸಿಂಗರಿಸುವಂತೆ ನಿರ್ದೇಶನ ನೀಡಿದೆ. ಆದರೆ ಉಡುಪಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲೆಯಲ್ಲಿನ ಒಟ್ಟು 1111 ಮತಗಟ್ಟೆಗಳನ್ನು ಜಿಲ್ಲೆಯ ಸಾಂಪ್ರದಾಯಿಕ ಕಲೆ, ಸಂಸ್ಕೃತಿ, ವೈಭವವನ್ನು ಬಿಂಬಿಸುವ ಚಿತ್ರಗಳನ್ನು ರಚಿಸುವ ಗುರಿ ಹೊಂದಿದ್ದು, ಆ ಮೂಲಕ ಮತಗಟ್ಟೆಗಳನ್ನು ಅತ್ಯಂತ ಆಕರ್ಷಕವಾಗಿ ಸಿಂಗರಿಸಲಾಗುತ್ತಿದೆ.

ಮತದಾನ ಕೇಂದ್ರಗಳಲ್ಲಿ ಚಿತ್ರ ಬಿಡಿಸುವ ಕಾರ್ಯದಲ್ಲಿ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರು ಹಾಗೂ ಕೆಲ ಅನುದಾನಿತ ಶಾಲಾ ಶಿಕ್ಷಕರು ಭಾಗವಹಿಸಿದ್ದು, ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಈ ಕಾರ್ಯವನ್ನು ಚುನಾವಣಾ ಕರ್ತವ್ಯ ಎಂಬಂತೆ ಅತ್ಯಂತ ಶ್ರದ್ದೆಯಿಂದ ತಮಗೆ ವಹಿಸಿದ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ.
ಚುನಾವಣಾ ಆಯೋಗ ಎಲ್ಲಾ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತಗಟ್ಟೆಯನ್ನು ಸ್ಥಳೀಯ ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸುವಂತೆ ತಿಳಿಸಿದೆ. ಆದರೆ ಉಡುಪಿ ಜಿಲ್ಲಾ ಪಂಚಾಯಿತಿ ಸ್ವೀಪ್ ಸಮಿತಿ ವಿನೂತನ ಕಲ್ಪನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳನ್ನು ಜಿಲ್ಲೆಯ ವಿವಿಧ ಕಲೆ ಸಂಸ್ಕೃತಿ ಆಚರಣೆ ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಕಾರ್ಯ ಆಯೋಜಿಸುತ್ತಿದೆ.