ಜಿಲ್ಲೆ

ಮದ್ಯಪಾನಿ ಚಾಲಕರಿಗೆ 'ಖಾಕಿ' ಮೂಗುದಾರ...

ಮಣಿಪಾಲದಲ್ಲಿ 18 ಕಾರು, 3 ಬೈಕ್​ ವಶ

ಪೊಲೀಸರಿಂದ ವಿವಿಧೆಡೆ ನಾಕಾಬಂಧಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಣಿಪಾಲ ಪೊಲೀಸ್​ ಠಾಣಾ ವ್ಯಾಪ್ತಿಯ 5 ಸ್ಥಳಗಳಲ್ಲಿ ಉಡುಪಿ ಉಪವಿಭಾಗದ ಪೊಲೀಸರು ಜುಲೈ 19ರಂದು ರಾತ್ರಿ ನಾಕಾಬಂಧಿ ಹಾಕಿದ್ದು, ಮದ್ಯಪಾನ ಮಾಡುವ ಮೂಲಕ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಮೂಗುದಾರ ಹಾಕಿದ್ದಾರೆ.

ವಾಹನಗಳ ದಿಢೀರ್​ ತಪಾಸಣೆ ನಡೆಸಿ, 18 ಕಾರು ಮತ್ತು 3 ಬೈಕ್​ ಸೇರಿ 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮದ್ಯಪಾನದೊಂದಿಗೆ ವಾಹನ ಚಲಾಯಿಸುತ್ತಿರುವವರನ್ನು ಹಿಡಿದು, ಅವರ ವಿರುದ್ಧ ಮೋಟಾರು ವಾಹನ ಅಧಿನಿಯಮ ಕಾನೂನಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳದಲ್ಲೇ ವಾಹನ ಚಾಲಕರಿಗೆ ದಂಡ

ಅಜಾಗರೂಕತೆಯ ಹಾಗೂ ನಿರ್ಲಕ್ಷ್ಯದ ವಾಹನ ಚಲಾಯಿಸುವಿಕೆ, ಪೊಲೀಸರ ಸೂಚನೆ ಉಲ್ಲಂಘನೆ, ಬೈಕ್​ನಲ್ಲಿ ಮೂವರು ಸವಾರಿ ಮಾಡಿದ ಪ್ರಕರಣಗಳನ್ನೂ ದಾಖಲಿಸಿಕೊಂಡ ಪೊಲೀಸರು, 10 ವಾಹನಗಳಿಗೆ ಸ್ಥಳದಲ್ಲೇ 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಉಡುಪಿ ಡಿವೈಎಸ್ಪಿ, ಮಣಿಪಾಲ ಪೊಲೀಸ್​ ನಿರೀಕ್ಷಕರ ನೇತೃತ್ವದಲ್ಲಿ ಉಡುಪಿ ನಗರ, ಉಡುಪಿ ಸಂಚಾರ, ಮಲ್ಪೆ ಹಾಗೂ ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪ ಸಾಬೀತಾದರೆ ನ್ಯಾಯಾಲಯ ಕನಿಷ್ಠ 10 ಸಾವಿರ ರೂ. ದಂಡ ವಿಧಿಸುತ್ತದೆ. ಯಾರೂ ಸಹ ಕುಡಿದು ವಾಹನ ಚಲಾಯಿಸಬಾರದು. ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವವರ ವಿರುದ್ಧ ಪೊಲೀಸ್​ ಕಾರ್ಯಾಚರಣೆ ಮುಂದುವರಿಯಲಿದೆ. | ಹರಿರಾಂ ಶಂಕರ್​. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ