ಉಡುಪಿ: ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವವನ್ನು ನಾಡಹಬ್ಬ ದಸರಾ ಮಾದರಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡುವ ಉದ್ದೇಶದಿಂದ ಮುಂದಿನ (2026ರಿಂದ) ಪರ್ಯಾಯ ಮಹೋತ್ಸವದಿಂದ ಉಡುಪಿಯ ನಗರಸಭೆ ವತಿಯಿಂದ 50 ಲಕ್ಷ ರೂ. ಅನುದಾನ ಮೀಸಲಿಡಲಾಗುವುದು. ಅದರಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಪರ್ಯಾಯ ಉತ್ಸವಕ್ಕೆ ವಿಶೇಷ ಮೆರಗು ನೀಡಲಾಗುವುದು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ವಿದ್ಯುತ್ ದೀಪಾಲಂಕಾರ ನಡೆಸುವ ಮಾದರಿಯಲ್ಲೇ ಉಡುಪಿಯಲ್ಲೂ ಆಯೋಜಿಸಲಾಗುವುದು. ಮುಂದಿನ ಎಲ್ಲ ಪರ್ಯಾಯ ಮಹೋತ್ಸವಕ್ಕೂ ಉಡುಪಿ ನಗರಸಭೆಯಿಂದಲೇ ಅನುದಾನ ಮೀಸಲಿಡಲು ನಿರ್ಣಯಿಸಲಾಗಿದೆ ಎಂದು ಹೇಳಿದ್ದಾರೆ.
ದೇಶ-ವಿದೇಶದಿಂದ ಪರ್ಯಾಯ ಉತ್ಸವಕ್ಕೆ ಸಾವಿರಾರು ಭಕ್ತರು ಉಡುಪಿಗೆ ಭೇಟಿ ನೀಡುತ್ತಾರೆ. ಹೀಗಾಗಿ ನಗರ ಅಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಈಗಾಗಲೇ ಪರ್ಯಾಯ ಪೂರ್ವಭಾವಿಯಾಗಿ ಉಡುಪಿ ನಗರದ ರಸ್ತೆ, ಚರಂಡಿ, ಸ್ವಚ್ಛತೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 25 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ತುರ್ತು ಕಾಮಗಾರಿಗಳಿಗೆ ಉಡುಪಿ ನಗರಸಭೆ ವತಿಯಿಂದ 5 ಕೋಟಿ ರೂ. ಮೀಸಲಿಡುವಂತೆ ಮನವಿ ಮಾಡಿದ್ದಾಗಿ ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.