ಜಿಲ್ಲೆ

ಕಾರು ಚರಂಡಿಗೆ ಬಿದ್ದು ಗ್ಯಾರೇಜ್ ಮಾಲಿಕ‌ ಸ್ಥಳದಲ್ಲೇ ಸಾವು

udupireporter

ಪಡುಬಿದ್ರಿ: ಪಡುಬಿದ್ರಿ ಉಚ್ಚಿಲ - ಮುದರಂಗಡಿ ರಸ್ತೆಯ ಎಲ್ಲೂರು ಬಳಿಯ ಪಣಿಯೂರು ಪೆಜತ್ತಕಟ್ಟೆ ಬಳಿ ಕಾರು ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಕಾಪು‌ ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಮೃತ ವ್ಯಕ್ತಿ.
ಉದ್ಯಾವರ ಬಲಾಯಿಪಾದೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ಅವರು ರವಿವಾರ ರಾತ್ರಿ ಎಲ್ಲೂರಿಗೆ ತೆರಳಿದ್ದು, ಅಲ್ಲಿಂದ ವಾಪಸಾಗುತ್ತಿರುವ ವೇಳೆ ಅಪಘಾತ ಸಂಭವಿಸರಬೇಕೆಂದು ಸಂಶಯಿಸಲಾಗಿದೆ.

ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ‌ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ರವೀಂದ್ರ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.‌ ಈ ವೇಳೆ ಅಲ್ಲೇ ರಸ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿರುವ ಸಾಧ್ಯತೆಗಳಿವೆ.

ಸೋಮವಾರ ಮುಂಜಾನೆ ಪೇಪರ್ ವಿತರಕರು ಇದನ್ನು ಗಮನಿಸಿ, ಸ್ಥಳೀಯರಿಗೆ ತಿಳಿಸಿದ್ದು, ಬಳಿಕ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಅಪಘಾತದ ಸಂದರ್ಭ ಭಾರೀ ಮಳೆ ಸುರಿಯುತ್ತಿದ್ದು, ಅಪಘಾತಕ್ಕೆ ಮಳೆಯೂ ಕಾರಣವಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.