ಜಿಲ್ಲೆ

ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್​ ಪ್ರಕರಣ: ಸಿಐಡಿಯಿಂದ ಮೊದಲ ಹಂತದ ತನಿಖೆ ಪೂರ್ಣ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪ್ಯಾರಾ ಮೆಡಿಕಲ್​ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ(ಸಿಐಡಿ) ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದೆ.

ಆ.8ರಂದು ಉಡುಪಿಗೆ ಆಗಮಿಸಿದ್ದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್​ ನೇತೃತ್ವದ ತನಿಖಾ ತಂಡ ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸಿಟ್ಯೂಟ್​ ಆಫ್​ ಅಲೈಡ್​ ಹೆಲ್ತ್​ ಸೈನ್ಸಸ್​ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಸಂತ್ರಸ್ತ, ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ. ಬೆರಳಚ್ಚು ಸಂಗ್ರಹಿಸಿ ಈ ಹಿಂದೆ ಪೊಲೀಸರು ಸಂಗ್ರಹಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರೋಪಿ ವಿದ್ಯಾರ್ಥಿನಿಯರಿಂದ ವಶಪಡಿಸಿಕೊಂಡ ಮೂರು ಮೊಬೈಲ್​ ಫೋನ್​ಗಳ ಬಗ್ಗೆ ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಪಡೆದ ನಂತರ ಸಿಐಡಿ ಅಧಿಕಾರಿಗಳ ತಂಡ, ಚಾರ್ಜ್​ಶೀಟ್​ ಸಿದ್ಧಪಡಿಸಲಿದೆ.

ಮೂವರು ಹುಡುಗಿಯರು ತಮ್ಮ ಮೊಬೈಲ್​ ಕ್ಯಾಮೆರಾ ಬಳಸಿ ಕಾಲೇಜಿನ ವಾಶ್​ರೂಮ್​ನಲ್ಲಿ ಇನ್ನೊಬ್ಬ ಯುವತಿಯ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.