ಉಡುಪಿ: ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಏನೆಲ್ಲಾ ಮಾಡಬಹುದು?. ಕರಾವಳಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಹೊಂದಿರುವ ಸ್ಥಳ. ಪ್ರತೀ ವರ್ಷ ದೇಶ-ವಿದೇಶದಿಂದ ಸಾವಿರಾರು ಮಂದಿ ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಟೆಂಪಲ್ ಟೂರಿಸಂ ಮೂಲಕ ಯುವ ಜನತೆಗೆ ಒಂದಷ್ಟು ಕೆಲಸ ದೊರಕಿಸಲು ಸಾಧ್ಯವೇ? ಹೀಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕನಸುಗಳನ್ನು ತೆರೆದಿಟ್ಟವರು ಮೂವರು ನೂತನ ಶಾಸಕರು.
ಶುಕ್ರವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ತಿಂಗಳೆ ಪ್ರತಿಷ್ಠಾನ ವತಿಯಿಂದ ನನ್ನ ಕ್ಷೇತ್ರ ನನ್ನ ಕನಸು ಸಂವಾದ ಕಾರ್ಯಕ್ರಮ ನಡೆಯಿತು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆ ಅನೇಕ ಬ್ಯಾಂಕ್‌ಗಳ ತವರೂರು. ಆದರೆ ಜಿಲ್ಲೆಯಲ್ಲಿ ಸ್ಥಳೀಯ ಉದ್ಯೋಗಿಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಪ್ರತೀ ವರ್ಷ 4 ರಿಂದ 5 ಸಾವಿರ ಮಂದಿ ಡಿಪ್ಲೊಮಾ, ಪದವಿ ಪಡೆಯುತ್ತಿದ್ದಾರೆ. ಅವರಿಗೆ ಜಿಲ್ಲೆಯಲ್ಲೇ ಕೆಲಸ ಸಿಗುವಂತಾಗಬೇಕು. ಮೆರಿನ್ ಸ್ಪೆಶಲ್ ಎಕಾನಮಿಕ್ ರೆನ್ ಮೂಲಕ ಮೀನುಗಾರಿಕಾ ಉದ್ಯಮಗಳು ಸ್ಥಾಪನೆಯಾದರೆ 10 ರಿಂದ 15 ಸಾವಿರ ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇದೆ. ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಸಂಧ್ಯಾ ಕಾಲೇಜು ಪ್ರಾರಂಭಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಹೀಗಾಗಿ ಯುವಜನತೆ ಕೃಷಿಯೊಂದಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮ ವಿದ್ಯುತ್ ಸಂಪರ್ಕ, ದೂರವಾಣಿ-ಇಂಟರ್‌ನೆಟ್ ಸಂಪಕ್, ಉತ್ತಮ ರಸ್ತೆ, ಆರೋಗ್ಯ ಸೇವೆ, ನೀರು ಸಮೃದ್ಧವಾಗಿ ಲಭಿಸುವಂತೆ ಮಾಡಬೇಕು. ಗುಡಿ-ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗಬೇಕು. ಇದಕ್ಕೆ ಪೂರಕ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ವಿದೇಶಗಳಲ್ಲಿ ಕರಾವಳಿ ಪ್ರವಾಸೋದ್ಯಮ ವ್ಯಾಪಕವಾಗಿ ಬೆಳೆದಿದೆ. ಇದರಿಂದ ವಿದೇಶಿ ವಿನಿಮಯ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಾಪು ಕ್ಷೇತ್ರದಲ್ಲಿ ಇದಕ್ಕೆ ಹೆಚ್ಚಿನ ಅವಕಾಶಗಳಿವೆ. ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚಿಸುವುದರಿಂದ ಹಿರಿಯ ಜೀವಗಳಿಗೆ ಮಕ್ಕಳು ಕಣ್ಣಮುಂದೆ ಇರುವಂತಾಗುತ್ತದೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಪ್ರತೀ ಕೈಗಾರಿಕೆಗಳಲ್ಲಿ ಶೇ. 50ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಅಧಿಕಾರಿಗಳು ಕನ್ನಡಿಗರಿಗೆ ಎಂಬುದಾಗಿ ದಾರಿತಪ್ಪಿಸುತ್ತಿದ್ದಾರೆ. ಜಿಲ್ಲೆಯ ಕೈಗಾರಿಕೆಗಳಲ್ಲಿ ಆಯಾ ಭಾಗದ ಯುವಕರನ್ನು ಸೇರಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು ಎಂದರು.
ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಶ್ರೀರಾಜ್ ಗುಡಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಸಂವಾದ ನಡೆಸಿಕೊಟ್ಟರು. ಪ್ರತಿಷ್ಠಾನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿದರು.