ಜಿಲ್ಲೆ

ಕೂರ್ಮ ರಾವ್ ಉಡುಪಿ ಡಿಸಿ, ಸಿಎಂ ಜಂಟಿ ಕಾರ್ಯದರ್ಶಿಯಾಗಿ ಜಿ.ಜಗದೀಶ್ ವರ್ಗಾವಣೆ

Udupi

ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ಈಶಾನ್ಯ ಸಾರಿಗೆ ಸಂಸ್ಥೆ ಆಡಳಿತ ವ್ಯವಸ್ಥಾಪಕ ಕೂರ್ಮ ರಾವ್ ಎಂ.ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

2019ರ ಆ.20ರಂದು ಜಿ.ಜಗದೀಶ್ ಜಿಲ್ಲೆಯ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅನೇಕ ವರ್ಷದಿಂದ ಬಾಕಿ ಉಳಿದಿದ್ದ ಮರಳು ಪೂರೈಕೆ ಸಮಸ್ಯೆಯನ್ನು ತಮ್ಮ ಅಧಿಕಾರ ಅವಧಿಯಲ್ಲಿ ಬಗೆಹರಿಸಿದ್ದರು. ಸರ್ಕಾರದ ಯೋಜನೆಗಳ ಅನುಷ್ಠಾನ, ಕಂದಾಯ ಸೇವೆ, ಕೋವಿಡ್ ಮಾರ್ಗಸೂಚಿ ಪಾಲನೆ ಸಂಬಂಧಿಸಿ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. 2012ರಲ್ಲಿ ಐಎಎಸ್‌ಗೆ ಬಡ್ತಿ ಹೊಂದಿದ್ದರು. ನೂತನ ಡಿಸಿ ಕೂರ್ಮ ರಾವ್ ಎಂ.ಮೂಲತಃ ಆಂಧ್ರಪ್ರದೇಶದವರಾಗಿದ್ದು, 2010ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಈ ಹಿಂದೆ ರಾಯಚೂರು ಜಿಪಂ ಸಿಇಒ ಹಾಗೂ ಯಾದಗಿರಿ ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.