ಜಿಲ್ಲೆ

154 ಅನಾಥ ಶವಗಳಿಗೆ ಸದ್ಗತಿ ಸಂಸ್ಕಾರ

Udupi

ಉಡುಪಿ: ಕರೊನಾ, ಅಪಘಾತ, ಸಹಿತ ವಿವಿಧ ಕಾಯಿಲೆಗಳಿಂದ ಮೃತಪಟ್ಟ 154 ಅನಾಥ ಶವಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಶನಿವಾರ ಅಮಾವಾಸ್ಯೆ ದಿನ ಅನಾಥ ಆತ್ಮಗಳಿಗೆ ಸದ್ಗತಿ ಪ್ರಾಪ್ತಿಗಾಗಿ ಪ್ರೇತ ಸಂಸ್ಕಾರ ನಡೆಸಿತು.

ಪೆರಂಪಳ್ಳಿ ಶೀಂಬ್ರಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಯಾಗ ಸಭಾಂಗಣದಲ್ಲಿ ಕರಂಬಳ್ಳಿ ನಾಗರಾಜ್ ಐತಾಳ್ ಸಾರಥ್ಯದ ಪುರೋಹಿತ ಬಳಗದಿಂದ ತಿಲಹೋಮ, ನಾರಾಯಣ ಬಲಿ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆದವು.

ಸಮಾಜಸೇವಕ ನಿತ್ಯಾನಂದ ಒಳಕಾಡು ಮುಂದಾಳತ್ವದಲ್ಲಿ ಸಂಸ್ಕಾರ ನೆರವೇರಿಸಲಾಯಿತು. ಪಿಂಡಗಳನ್ನು ಸುವರ್ಣ ನದಿಯ ಕೃಷ್ಣಾಂಗರಕ ಸ್ನಾನಘಟ್ಟದಲ್ಲಿ ಹರಿಯಬಿಡಲಾಯಿತು.

ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಕಾರ್ಯಕ್ರಮದ ಸಮಾಪನದಲ್ಲಿ ಉಪಸ್ಥಿತರಿದ್ದರು. ನಾಗರಿಕ ಸಮಿತಿ ಸಾರ್ವಜನಿಕ ಸ್ಥಳದಲ್ಲಿ ನೆಲೆಕಂಡಿರುವ ನಿರ್ಗತಿಕರು, ಅನಾಥರನ್ನು ಆಸ್ಪತ್ರೆಗೆ ದಾಖಲಿಸುವ ಸೇವಾಕಾರ್ಯದಲ್ಲಿ ನಿರತವಾಗಿದೆ. ವಾರಸುದಾರರು ಇಲ್ಲದಿರುವ ಅನಾಥ ಶವಗಳಿಗೆ ಅನಾಥಪ್ರಜ್ಞೆ ಕಾಡದಂತೆ, ಬಂಧುಗಳಂತೆ ಅಂತ್ಯಸಂಸ್ಕಾರ ನಡೆಸಿದ್ದಲ್ಲದೆ, ಸದ್ಗತಿ ಸತ್ಕಾರ್ಯ ನಡೆಸಿರುವ ಬಗ್ಗೆ, ಅಪರ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಪೊಲೀಸ್ ಠಾಣೆ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ನಾಗರಿಕ ಸಮಿತಿ ಪದಾಧಿಕಾರಿಗಳಾದ ಮುರುಳಿಧರ್ ಬಲ್ಲಾಳ್, ಸ್ವಾತಿ. ಎಂ. ಬಲ್ಲಾಳ್, ಲಕ್ಷ್ಮಿಎಂ.ಬಲ್ಲಾಳ್, ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್, ಪಾಡಿಗಾರ್ ಮುರಳಿಧರ್ ರಾವ್, ಗಣೇಶ್ ರಾಜ್ ಸರಳಬೆಟ್ಟು, ರಾಮದಾಸ್ ಪಾಲನ್, ಸುಶೀಲಾ ರಾವ್ ಉಡುಪಿ ಉಪಸ್ಥಿತರಿದ್ದರು.