ಸಾರ್ವಜನಿಕರಿಗೆ ಉಡುಪಿ ನಗರಸಭೆ ಸೂಚನೆ
ಶ್ವಾನಗಳಿಗೆ ತಿಂಡಿ ನೀಡಲು ವಿವಿಧೆಡೆ ಸ್ಥಳ ನಿಗದಿ
ನಗರಸಭೆಯ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಹೀಗಾಗಿ ಬೀದಿ ನಾಯಿಗಳಿಗೆ ಅನಧಿಕೃತವಾಗಿ ರಸ್ತೆ, ಚರಂಡಿಗಳ ಮೇಲೆ, ಶಾಲಾ ವಠಾರ, ಜನನಿಬಿಡ ಪ್ರದೇಶ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಯಾರೂ ಸಹ ಆಹಾರ ಹಾಕಬಾರದು ಎಂದು ನಗರಸಭೆ ಸೂಚಿಸಿದೆ.
ನಗರಸಭೆಯಿಂದಲೇ ಪ್ರಾಥಮಿಕ ಹಂತದಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿ ಎದುರು, ಆದಿಉಡುಪಿ ಮಾರುಕಟ್ಟೆಯ ಹಿಂಬದಿ, ಇಂದ್ರಾಳಿ ಹಿಂದು ರುದ್ರಭೂಮಿ ಎದುರು, ಪರ್ಕಳ ಸ್ವಾಗತ ಗೋಪುರದ ಸಮೀಪ, ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕದ ಎದುರು, ಪೆರಂಪಳ್ಳಿ ಮುಖ್ಯ ರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ನ ಕೆಳ ಭಾಗ, ರಾಜ್ ಫಿಶ್ ಮಿಲ್ ಸಮೀಪ, ಆದಿಉಡುಪಿ ಮಲ್ಪೆ ರಸ್ತೆಯ ಹೆಲಿಪ್ಯಾಡ್ ಸಮೀಪ, ಕಕ್ಕುಂಜೆ ನಾರಾಯಣ ನಗರಕ್ಕೆ ಹೋಗುವ ರಸ್ತೆಯ ತಿರುವು ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ನ ಡಯಾನಾ ರಸ್ತೆ ಮಾರ್ಗದ ವಿಜಯ ವೀರ ಸಂಘದ ಸಮೀಪದಲ್ಲಿ ನಿಯಮಾನುಸಾರ ಷರತ್ತು ವಿಧಿಸಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸ್ಥಳ ಗುರುತಿಸಲಾಗಿದೆ.
ತಿಂಡಿ ಕೊಡುವವರೇ ಹೊಣೆ
ಇನ್ನಿತರ ಯಾವುದೇ ನಿಗದಿತ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸಾರ್ವಜನಿಕರಿಗೆ ಆಸಕ್ತಿಯಿದ್ದಲ್ಲಿ ನಗರಸಭೆಗೆ ಲಿಖಿತ ಮನವಿ ಸಲ್ಲಿಸಬಹುದು. ಆಹಾರ ಹಾಕುವವರಿಗೆ ಅನುಮತಿ ಹಾಗೂ ಗುರುತಿನ ಚೀಟಿ ಕಡ್ಡಾಯ. ಆಹಾರ ಹಾಕುವವರೇ ಸದರಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಬೇಕು. ಅಲ್ಲದೆ, ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನೂ ನಡೆಸಬೇಕು. ಇದೂ ಸಹ ನಾಯಿಗಳಿಗೆ ತಿಂಡಿ ಕೊಡುವವರ ಹೊಣೆಯಾಗಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಾನೂನು ಕ್ರಮದ ಎಚ್ಚರಿಕೆ
ಮನೆಗಳಲ್ಲಿ ನಾಯಿ ಸಾಕುವವರು ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದು ಕಂಡು ಬಂದಿದ್ದು, ಅದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ. ಮನೆಗಳಲ್ಲಿ ಸಾಕುವ ನಾಯಿಗಳಿಗೂ ಸಹ ಮಾಲೀಕರು ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಚಿಕಿತ್ಸೆ ಮಾಡಬೇಕು. ಅವುಗಳ ಕುತ್ತಿಗೆಗೆ ಬೆಲ್ಟ್ ಅಳವಡಿಸಬೇಕು. ಸಾಕು ನಾಯಿ ಅಥವಾ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಎಚ್ಚರಿಕೆ ನೀಡಿದ್ದಾರೆ.