ಜಿಲ್ಲೆ

ಚರಂಡಿ ಒತ್ತುವರಿ ತೆರವಿಗೆ ಸೂಚನೆ...

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಯಶ್​ಪಾಲ್​ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಂಗಳವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದ ಮಣಿಪಾಲ, ಲಕ್ಷ್ಮೀಂದ್ರ ನಗರ ಮತ್ತು ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಚರಂಡಿ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಸಮಸ್ಯೆ ಆಗಿತ್ತು. ಇದೀಗ ಎಲ್ಲೆಡೆ ನೀರು ಸರಾಗವಾಗಿ ಹರಿಯುವಂತೆ ಚರಂಡಿಯನ್ನು ಸುಸ್ಥಿತಿಗೆ ತರಲಾಗುತ್ತಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿಯ ವಿವಿಧೆಡೆ ಮಳೆಯಿಂದ ಉಂಟಾಗಿದ್ದ ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರೊಂದಿಗೆ ಮೇ 21ರಂದು ಭೇಟಿ ನೀಡಿ, ಚರಂಡಿ ರಿಪೇರಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಲಕ್ಷ್ಮೀಂದ್ರ ನಗರದಲ್ಲಿ ಕಾಂಕ್ರೀಟ್​ ರಸ್ತೆಯಿಂದ ಮುಚ್ಚಿದ್ದ ಭಾಗ ತೆರವು ಮಾಡಿ ಚರಂಡಿಗೆ ಸಂಪರ್ಕ ಕಲ್ಪಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ. ಮಣಿಪಾಲ ಕೈಗಾರಿಕಾ ಪ್ರದೇಶ ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಕೆಲವೆಡೆ ಚರಂಡಿ ಒತ್ತುವರಿ ಮಾಡಿದ್ದರಿಂದ ಅದರ ಅಗಲ ಕಿರಿದಾಗಿದೆ. ಕೂಡಲೇ ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಭಾರತಿ ಪ್ರಶಾಂತ, ಕಲ್ಪನಾ ಸುಧಾಮ, ಬಾಲಕೃಷ್ಣ ಶೆಟ್ಟಿ, ಅಶೋಕ ನಾಯ್ಕ, ಚಂದ್ರಶೇಖರ, ಗಿರಿಧರ ಆಚಾರ್ಯ, ಪ್ರಮುಖರಾದ ದಿನೇಶ ಅಮೀನ್​ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು.