ಜಿಲ್ಲೆ

ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿ...

ಸಿಎಂ ಸಿದ್ದರಾಮಯ್ಯಗೆ ಯಶ್​ಪಾಲ್​ ಸುವರ್ಣ ಪತ್ರ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾಡಿನ ಛಾಯಾಗ್ರಾಹಕರ ಬಹು ವರ್ಷಗಳ ಬೇಡಿಕೆಯಂತೆ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಆರಂಭಿಸಿ, ಆ ವೃತ್ತಿಗೆ ಮಾನ್ಯತೆ ಒದಗಿಸಿ ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 29ರಂದು ಪತ್ರ ಬರೆದಿದ್ದಾರೆ.

ಕರ್ನಾಟಕದಲ್ಲಿ 4 ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರು ಸಕ್ರಿಯರಾಗಿದ್ದಾರೆ. ಛಾಯಾಗ್ರಹಣವು ಕೇವಲ ಕಲೆ ಅಥವಾ ವೃತ್ತಿಯಷ್ಟೇ ಅಲ್ಲ. ಅದು ಸಂಸ್ಕೃತಿಯ ಸಂರಕ್ಷಣೆ, ಸಾಮಾಜಿಕ ಬದಲಾವಣೆ, ಶಿಕ್ಷಣ, ತಾಂತ್ರಿಕ ನೈಪುಣ್ಯವರ್ಧನೆ ಹಾಗೂ ಬದುಕು ಕಟ್ಟಿಕೊಳ್ಳುವ ಮಹತ್ವದ ಕ್ಷೇತ್ರವಾಗಿದೆ. ಪತ್ರಿಕೋದ್ಯಮ, ಹಬ್ಬ-ಉತ್ಸವ, ವಿವಾಹ, ನೈಸರ್ಗಿಕ ಮತ್ತು ಸಾಂಸ್ಕೃತಿಕ ಛಾಯಾಗ್ರಹಣದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಸರ್ಕಾರ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿದೆ. ನಮ್ಮ ರಾಜ್ಯದ ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ, ಅವರಿಗಾಗಿ ಸರ್ಕಾರಿ ಮಾನ್ಯತೆಯ ಛಾಯಾಗ್ರಹಣ ಅಕಾಡೆಮಿ ಇಲ್ಲವಾಗಿದೆ ಎಂದು ಯಶ್​ಪಾಲ್​ ಪತ್ರದಲ್ಲಿ ತಿಳಿಸಿದ್ದಾರೆ.

ಯುವಸಬಲೀಕರಣ ಕಾರ್ಯಕ್ಕೂ ಪೂರಕ

ರಾಜ್ಯದಲ್ಲಿ ಅಕಾಡೆಮಿ ಸ್ಥಾಪನೆಯಾದರೆ ವೃತ್ತಿಗೆ ಮಾನ್ಯತೆ, ಸಾಂಸ್ಕೃತಿಕ ಮತ್ತು ಐತಿಹಾಸಿಕ ದಾಖಲೆಗಳ ಸಂರಕ್ಷಣೆ, ಛಾಯಾಗ್ರಾಹಕರಿಗೆ ತಾಂತ್ರಿಕ ಕೌಶಲ ಕಾರ್ಯಕ್ರಮ, ಹಿರಿಯರಿಗೆ ಪಿಂಚಣಿ, ವಿಮೆ, ಪ್ರಶಸ್ತಿ, ಪ್ರವಾಸೋದ್ಯಮ ಚಟುವಟಿಕೆಗೆ ಪ್ರೋತ್ಸಾಹ ನೀಡಬಹುದಾಗಿದೆ. ಯುವಸಬಲೀಕರಣಕ್ಕೆ ಪೂರಕವಾಗಿಯೂ ಶಕ್ತಿ ನೀಡಬಹುದಾಗಿದೆ. ರಾಜ್ಯದಲ್ಲಿ ಅಕಾಡೆಮಿ ಸ್ಥಾಪಿಸುವಂತೆ ಸಮಸ್ತ ಛಾಯಾಗ್ರಾಹಕರ ಪರವಾಗಿ ಮನವಿ ಮಾಡುವುದಾಗಿ ಯಶ್​ಪಾಲ್​ ಪತ್ರದಲ್ಲಿ ತಿಳಿಸಿದ್ದಾರೆ.