ಜಿಲ್ಲೆ

ಧಾರ್ಮಿಕ ಆಚರಣೆಯ ಕಾನೂನು ನಿಯಮ ಸರಳಗೊಳಿಸಿ...

ಗೃಹ ಸಚಿವ ಪರಮೇಶ್ವರಗೆ ಶಾಸಕ ಯಶ್​ಪಾಲ್​ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರಾವಳಿ ಜಿಲ್ಲೆಗಳ ನಡೆಯುವ ಧಾರ್ಮಿಕ ಆಚರಣೆಗಳನ್ನು ಈ ಹಿಂದಿನಂತೆಯೇ ಆಯೋಜಿಸುವಂತಾಗಲು ಇತ್ತೀಚೆಗೆ ಅಳವಡಿಸುತ್ತಿರುವ ಕಾನೂನು ನಿಯಮ ಸರಳೀಕರಣಗೊಳಿಸಿ ಅವಕಾಶ ನೀಡುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಆ.22ರಂದು ಸಚಿವರನ್ನು ಭೇಟಿಯಾಗಿ, ಕರಾವಳಿ ಭಾಗದ ತುಳುನಾಡಿನಲ್ಲಿ ಅನೇಕ ಸಾಂಪ್ರದಾಯಿಕ ಆಚರಣೆಗಳಿವೆ. ಕೋಲ, ನೇಮೋತ್ಸವ, ಜಾತ್ರಾ ಮಹೋತ್ಸವ, ನಾಗಮಂಡಲ, ಯಕ್ಷಗಾನ ಮೊದಲಾದವುಗಳನ್ನು ಅನಾದಿ ಕಾಲದಿಂದ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ಇದಲ್ಲದೆ, ಪ್ರತಿವರ್ಷ ಸಾರ್ವಜನಿಕ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನವರಾತ್ರಿ ಉತ್ಸವಗಳನ್ನು ಇತರೆಡೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲಾಗುತ್ತದೆ ಎಂದು ಯಶ್​ಪಾಲ್ ಮನವರಿಕೆ ಮಾಡಿದರು.

ಸಾಂಪ್ರದಾಯಿಕ ಪದ್ಧತಿಗೆ ತೊಂದರೆ

ಇತ್ತೀಚೆಗಿನ ದಿನಗಳಲ್ಲಿ ಜಿಲ್ಲಾ ಪೊಲೀಸ್​ ಇಲಾಖೆಯು ಈ ಎಲ್ಲ ಆಚರಣೆ ನಡೆಸಲು ಕಠಿಣ ನಿಯಮ ಜಾರಿಗೊಳಿಸಿ, ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸುತ್ತಿದೆ. ಶೋಭಾ ಯಾತ್ರೆ, ಧ್ವನಿ ವರ್ಧಕ ಬಳಕೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇದು ನಮ್ಮ ಸಾಂಪ್ರದಾಯಿಕ ಪದ್ಧತಿ ಅನುಸರಿಸಲು ಹಾಗೂ ಕಾರ್ಯಕ್ರಮ ಆಯೋಜಿಸಲು ಅನಾನುಕೂಲ ಆಗುತ್ತಿದೆ. ಕರಾವಳಿ ಜಿಲ್ಲೆಯ ಸಾರ್ವಜನಿಕ ಹಬ್ಬ ಹಾಗೂ ಧಾರ್ಮಿಕ ಆಚರಣೆಗಳಿಗೆ ಅನಗತ್ಯ ಕಾನೂನು ನಿಯಮ ಅಳವಡಿಸದೆ ಸರಳೀಕರಣಗೊಳಿಸಿ ತ್ವರಿತವಾಗಿ ಅನುಮತಿ ನೀಡಬೇಕು ಎಂದು ಕರಾವಳಿ ಭಾಗದ ಜನತೆಯ ಪರವಾಗಿ ತಮಗೆ ಮನವಿ ಸಲ್ಲಿಸುತ್ತಿರುವುದಾಗಿ ಯಶ್​ಪಾಲ್​ ಸುವರ್ಣ ತಿಳಿಸಿದರು.