ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕ ಜಂಕ್ಷನ್ ಬಳಿ ಪೊಲೀಸ್ ಇಲಾಖೆ ಅಳವಡಿಸಿರುವ ಬ್ಯಾರಿಕೇಡ್ಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ್ ಅವರಿಗೆ ಶಾಸಕ ಯಶ್ಪಾಲ್ ಸುವರ್ಣ ಆಗಸ್ಟ್ 9ರಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಉಡುಪಿಗೆ ಆಗಮಿಸುತ್ತಿದ್ದ ಭಾರಿ ಸಂಖ್ಯೆಯ ಪ್ರವಾಸಿಗರ ವಾಹನದ ದಟ್ಟಣೆ ನಿಯಂತ್ರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಅಂದು ಕಲ್ಸಂಕ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದೀಗ ಪ್ರವಾಸಿಗರ ವಾಹನ ದಟ್ಟಣೆ ಇಲ್ಲವಾಗಿದ್ದು ಬ್ಯಾರಿಕೇಡ್ಗಳನ್ನು ತೆರೆವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ವಾರದಲ್ಲಿ ಎರಡು ದಿನ ಬಂದ್
ಕಳೆದ 4-5 ತಿಂಗಳಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಮಾತ್ರ ಕಲ್ಸಂಕ ವೃತ್ತದಲ್ಲಿ ಗುಂಡಿಬೈಲು ಮಾರ್ಗಕ್ಕೆ ತೆರಳುವ ಹಾಗೂ ಆ ಭಾಗದಿಂದ ಉಡುಪಿ ಸಿಟಿ ಕಡೆಗೆ ಬರುವ ಮಾರ್ಗವನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗುತ್ತಿದೆ. ಈ ಕ್ರಮದಿಂದ ಸಿಟಿ ಬಸ್ ನಿಲ್ದಾಣ ಮತ್ತು ಕುಂಜಿಬೆಟ್ಟು ಬಳಿಯ ಯೂ ರ್ಟನ್ಗಳಲ್ಲಿಯೂ ಆ ದಿನಗಳಂದು ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು ಹಾಗೂ ಶ್ರೀಕೃಷ್ಣ ಮಠ, ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಮತ್ತು ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿದೆ. ಈ ಕುರಿತು ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಿವೈಡರ್ ತೆರವುಗೊಳಿಸಿ
ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಬಳಿ ಮಣಿಪಾಲಕ್ಕೆ ತೆರಳುವ ವಾಹನಗಳು ಕಡಿಯಾಳಿ ಬಳಿ ಯೂ ರ್ಟನ್ ತೆಗದುಕೊಳ್ಳುತ್ತಿವೆ. ಅದರಿಂದ ಕಡಿಯಾಳಿ ಬಳಿ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಶಾರದಾ ಮಂಟಪದ ಕಡೆಯಿಂದ ಬರುವ ಹಲವು ವಾಹನಗಳು ಬಲಕ್ಕೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಕೂಡಲೇ ಡಿವೈಡರ್ ತೆರವು ಮಾಡುವಂತೆ ಯಶ್ಪಾಲ್ ಆಗ್ರಹಿಸಿದ್ದಾರೆ.
ಗಮನ ಸೆಳೆದಿದ್ದ ವಿಜಯವಾಣಿ
ಹಿಂದಿನ ಎಸ್ಪಿ ಡಾ. ಕೆ.ಅರುಣಕುಮಾರ್ ಅವರು ಕಲ್ಸಂಕ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು. ಅವರ ಈ ಕ್ರಮದಿಂದ ಕೃತವಾಗಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತಿರುವ ಕುರಿತು ಕಳೆದ ವರ್ಷ ಡಿ.27ರಂದು ಉಡುಪಿ ಕಲ್ಸಂಕಕ್ಕೆ ಖಾಕಿ ಬೇಲಿ ಎಂಬ ಫೋಕಸ್ ಸ್ಟೋರಿ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಈ ವರದಿ ನಗರಸಭೆಯಲ್ಲೂ ಚರ್ಚೆಗೊಂಡು ಬ್ಯಾರಿಕೇಡ್ ತೆರವುಗೊಳಿಸಿ, ಈ ಹಿಂದಿನಂತೆ ಸಿಗ್ನಲ್ ಅಳವಡಿಸಲು ಸಲಹೆ ಬಂದಿತ್ತು. ಮುಂದಿನ 15 ದಿನದಲ್ಲಿ ಸಿಗ್ನಲ್ ಅಳವಡಿಸುವುದಾಗಿ ಶಾಸಕರೂ ತಿಳಿಸಿದ್ದರು. ಆದರೆ, ಅನೇಕ ತಿಂಗಳು ಕಳೆದರೂ ಸಿಗ್ನಲ್ ಲೈಟ್ ಅಳವಡಿಸಿಲ್ಲ, ಬ್ಯಾರಿಕೇಡ್ ಅಳವಡಿಸುವುದೂ ತಪ್ಪಿಲ್ಲ. ಇದೀಗ ನೂತನ ಎಸ್ಪಿ ಹರಿರಾಮ ಶಂಕರ್ ಅವರು ಕಲ್ಸಂಕದಲ್ಲಿ ಅಳವಡಿಸುವ ಬ್ಯಾರಿಕೇಡ್ ತೆರವು ಮಾಡಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.