ಜಿಲ್ಲೆ

ಗೋಶಾಲೆಗಳಿಗೆ ಅನುದಾನ ಒದಗಿಸಿ...

ಪಶುಸಂಗೋಪನಾ ಸಚಿವರಿಗೆ ಶಾಸಕ ಯಶ್​ಪಾಲ್​ ಪತ್ರ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯಲ್ಲಿ ಗೋವುಗಳ ರಕ್ಷಣೆ ಹಾಗೂ ಸೇವೆಯಲ್ಲಿ ನಿರತವಾಗಿರುವ ಗೋಶಾಲೆಗಳ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಿ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಜುಲೈ 7ರಂದು ಪತ್ರ ಬರೆದು ವಿನಂತಿಸಿದ್ದಾರೆ.

ಸನಾತನ ಹಿಂದು ಧರ್ಮದಲ್ಲಿ ಪೂಜನೀಯವಾದ ಗೋವುಗಳ ರಕ್ಷಣೆ ಮತ್ತು ಪಾಲನೆಗೆಂದು ಜಿಲ್ಲೆಗಳಲ್ಲಿ ಹಲವು ಗೋಶಾಲೆ ಕಾರ್ಯ ನಿರ್ವಹಿಸುತ್ತಿವೆ. ರೈತರಿಗೆ ಸಾಕಲು ಕಷ್ಟವಾಗಿರುವ ದನಗಳು, ಬರಡು ದನಗಳನ್ನು ಗೋಶಾಲೆಗಳೇ ಸಾಕುತ್ತಿವೆ. ಬೀಡಾಡಿ ದನ ಹಾಗೂ ಅಕ್ರಮ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ದನಗಳನ್ನೂ ಪೊಲೀಸರು ಖಾಸಗಿ ಗೋಶಾಲೆಗಳಿಗೆ ಬಿಡುತ್ತಿದ್ದಾರೆ. ಹೀಗಾಗಿ ಖಾಸಗಿ ಗೋಶಾಲೆಗಳ ನಿರ್ವಹಣೆಗೆ ಅನುದಾನದ ಕೊರತೆಯಿಂದ ಅವುಗಳ ಆರೈಕೆಗೆ ಸಮಸ್ಯೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾರ್ಯಗತವಾಗದ ಒಡಂಬಡಿಕೆ

ಉಡುಪಿ ಜಿಲ್ಲೆಯ ಹೆಬ್ರಿಯ ಶಿವಪುರದಲ್ಲಿ ಸ್ಥಾಪಿಸಿರುವ ಏಕೈಕ ಸರ್ಕಾರಿ ಗೋಶಾಲೆಯಲ್ಲಿ ಕೇವಲ 60 ದನಗಳನ್ನು ಪೋಷಿಸುವಷ್ಟು ಮಾತ್ರ ಕಟ್ಟಡ ವ್ಯವಸ್ಥೆ ಇದೆ. ಆ ಕಟ್ಟಡವೂ ದುರಸ್ತಿ ಹಂತದಲ್ಲಿದೆ. ಈ ಗೋಶಾಲೆಯ ಹಿತದೃಷ್ಟಿಯಿಂದ ಸಮರ್ಪಕ ನಿರ್ವಹಣೆಗಾಗಿ ಪೇಜಾವರ ಶ್ರೀಗಳ ನೇತೃತ್ವದದ ಗೋಶಾಲೆಯ ಟ್ರಸ್ಟ್​ಗೆ ಹಸ್ತಾಂತರಿಸುವಂತೆ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಇನ್ನೂ ಸಹ ಹಸ್ತಾಂತರವಾಗಿಲ್ಲ. ಸರ್ಕಾರ ಕೂಡಲೇ ಈ ಕುರಿತು ವಿಶೇಷ ಮುತುವರ್ಜಿ ವಹಿಸಬೇಕು. ಅಥವಾ ನೂತನ ಕಟ್ಟಡ ನಿರ್ಮಿಸಲು ಕೂಡಲೇ ಅನುದಾನ ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಯಶ್​ಪಾಲ್​ ಸುವರ್ಣ ಒತ್ತಾಯಿಸಿದ್ದಾರೆ.