ಜಿಲ್ಲೆ

ಶ್ರೀಕೃಷ್ಣನಿಗೆ 'ಸುಶ್ರೀಂದ್ರ ಶ್ರೀ ಬರ್ತಡೇ' ಗಿಫ್ಟ್...

ಮುತ್ತಿನ ಕವಚ-ಕಿರೀಟ ಸಮರ್ಪಣೆ

ಪರ್ಯಾಯ ಪುತ್ತಿಗೆ ಕಿರಿಯ ಯತಿಯ 37ನೇ ಜನ್ಮನಕ್ಷತ್ರ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಗಸ್ಟ್​ 4ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ ತುಂಬಿತ್ತು. ಪರ್ಯಾಯ ಪುತ್ತಿಗೆ ಮಠದ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ 37ನೇ ಜನ್ಮನಕ್ಷತ್ರದ ನಿಮಿತ್ತ ಕಡಗೋಲುಧಾರಿ ಮುದ್ದು ಶ್ರೀಕೃಷ್ಣನಿಗೆ ಮುತ್ತಿನ ಕವಚ-ಕಿರೀಟ ಸಮರ್ಪಿಸಲಾಯಿತು.

ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀಗಳೊಂದಿಗೆ ಶ್ರೀಕೃಷ್ಣನಿಗೆ ಮುತ್ತಿನ ಕವಚ-ಕಿರೀಟ ತೊಡಿಸಿದರು.

ಶ್ರೀಕೃಷ್ಣ ಶಕ್ತಿ ನೀಡಲಿ

ಹೊಸ ಆಭರಣದಲ್ಲಿ ಶ್ರೀಕೃಷ್ಣ.

ಸುಶ್ರೀಂದ್ರ ಶ್ರೀಗಳ ಜನ್ಮನಕ್ಷತ್ರದ ನಿಮಿತ್ತ ಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ, ವಿರಜ ಹೋಮಾದಿ ಕಾರ್ಯಕ್ರಮ ನಡೆಯಿತು. ಹಿರಿಯ ಶ್ರೀಗಳು ತನ್ನ ಶಿಷ್ಯನಿಗೆ ಕಲಶ ಸ್ನಾನ ನೆರವೇರಿಸಿದರು. ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ಸಾಮರ್ಥ್ಯವನ್ನು ಶ್ರೀಕೃಷ್ಣನು ನನ್ನ ಶಿಷ್ಯನಿಗೆ ಅನುಗ್ರಹಿಸಲಿ. ನಮ್ಮ ಪರಂಪರೆ ಮುನ್ನಡೆಸುವ ಶಕ್ತಿಯನ್ನೂ ನೀಡಲಿ ಎಂದು ಶುಭ ಹಾರೈಸಿದರು.

ಭಕ್ತಾದಿಗಳಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಕೃಷ್ಣ ಪ್ರಸಾದ ನೀಡಲಾಯಿತು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಠದ ಡಾ.ಬಿ.ಗೋಪಾಲ ಆಚಾರ್ಯ, ರಮೇಶ ಭಟ್​, ಮಹಿತೋಷ ಆಚಾರ್ಯ ಇತರರಿದ್ದರು.

ತಾಯಿಯ ಪಾದಕ್ಕೆರಗಿದ ಪುತ್ರ

ಜನ್ಮನಕ್ಷತ್ರ ಕಾರ್ಯಕ್ರಮದಲ್ಲಿ ಸುಶ್ರೀಂದ್ರ ಶ್ರೀಗಳ ಪೂರ್ವಾಶ್ರಮದ ತಂದೆ-ತಾಯಿಗಳಾದ ಅಡ್ವೆ ಗುರುರಾಜ ಆಚಾರ್ಯ ದಂಪತಿ ಉಪಸ್ಥಿತರಿದ್ದರು. ಈ ವೇಳೆ ಶ್ರೀಗಳು ತಾಯಿ ವಿನುತಾ ಆಚಾರ್ಯ ಅವರ ಪಾದಕ್ಕೆ ಸುಶ್ರೀಂದ್ರ ಶ್ರೀ ಸಾಷ್ಟಾಂಗ ನಮಸ್ಕಾರ ಹಾಕಿದರು. ತಾಯಿಯೂ ಕೈಮುಗಿದು ಮನಸಾರೆ ಹರಸಿದಳು. ತಾಯಿಯ ಋಣ ತೀರಿಸಲಾಗದು ಎಂಬ ಆ ದೃಶ್ಯ ಅಲ್ಲಿ ಸೇರಿದ್ದ ಭಕ್ತರಲ್ಲೂ ತೀವ್ರ ಸಂಚಲನ ಮೂಡಿಸಿತು.
ಪುತ್ತಿಗೆ ಸುಗುಣೇಂದ್ರ ಶ್ರೀಗಳಿಗೆ ಒಳ್ಳೆಯ ಶಿಷ್ಯನನ್ನು ಶ್ರೀಕೃಷ್ಣ ಕರುಣಿಸಿದ್ದಾನೆ. ಪರ್ಯಾಯ ಆರಂಭದ ಮೊದಲ ದಿನದಿಂದ ಈವರೆಗೆ ನಿತ್ಯವೂ ಶ್ರೀಕೃಷ್ಣನನ್ನು ವಿವಿಧ ರೀತಿಯಲ್ಲಿ ಅಲಂಕಾರಗೊಳಿಸಿ ಭಕ್ತರಿಗೂ ದೇವರ ಶ್ರದ್ಧೆ ಹೆಚ್ಚಿಸುವಂತೆ ಮಾಡಿದ್ದಾರೆ. ನಾಳೆ ಏನು ಅಲಂಕಾರ ಮಾಡಬಹುದು ಎಂಬ ಕುತೂಹಲವೂ ಉಂಟಾಗುತ್ತಿದೆ. ದೇವರನ್ನು ಸುಂದರವಾಗಿ ಅಲಂಕರಿಸುವುದರಲ್ಲಿ ಸುಶ್ರೀಂದ್ರರು ತಜ್ಞರಾಗಿದ್ದಾರೆ. ಅವರಿಗೆ ಜ್ಞಾನ, ಅಧ್ಯಾತ್ಮ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಮಾಡಲು ಶ್ರೀಕೃಷ್ಣ ಅವಕಾಶ ಕರುಣಿಸಲಿ. | ವಿಶ್ವಪ್ರಿಯ ತೀರ್ಥ ಶ್ರೀಪಾದರು. ಅದಮಾರು ಮಠ