ಉಡುಪಿಯ ಶ್ರೀ ಲಕ್ಷ್ಮೀ-ವೆಂಕಟೇಶ ದೇವಸ್ಥಾನದಲ್ಲಿ ಶ್ರೀರಾಮ ದೇವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು 
ಜಿಲ್ಲೆ

ಶ್ರೀ ಲಕ್ಷ್ಮೀ-ವೆಂಕಟೇಶ ದೇವಸ್ಥಾನದಲ್ಲಿ 2025ರ ಅ.18ರವರೆಗೆ ಶ್ರೀರಾಮ ನಾಮ ಜಪ ಅಭಿಯಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ಶ್ರೀ ಲಕ್ಷ್ಮೀ-ವೆಂಕಟೇಶ ದೇವಸ್ಥಾನದಲ್ಲಿ ಜಿಎಸ್‌ಬಿ ಸಮಾಜದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆ ಮತ್ತು ಮಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಅವರಿಂದ ಉಪದೇಶಿಸಲ್ಪಟ್ಟ ಶ್ರೀರಾಮ ನಾಮ ಜಪ ಅಭಿಯಾನ ಅಕ್ಷಯ ತೃತೀಯಾ ದಿನದಿಂದ ಆರಂಭಗೊಂಡಿತು.

ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ , ಶ್ರೀರಾಮ ದೇವರ ಭಾವಚಿತ್ರದ ಮೆರವಣಿಗೆ ಮೂಲಕ ಶ್ರೀ ಸಚ್ಚಿದಾನಂದ ಸಭಾಗ್ರಹದಲ್ಲಿ ಶ್ರೀರಾಮ ನಾಮ ಜಪ ಪ್ರಾರಂಭಗೊಂಡಿದ್ದು, 2025ರ ಅ.18ರವರೆಗೆ ಅಭಿಯಾನ ನಡೆಯಲಿದೆ.

ಅಭಿಯಾನದ ಪ್ರಥಮ ದಿನದ ಮೊದಲನೆಯ ಪಾಳಿಗೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಮಂದಿ ಪಾಲ್ಗೊಂಡಿದ್ದರು. ಶ್ರೀರಾಮ ನಾಮಜಪ ಅಭಿಯಾನಕ್ಕೆ ಉಡುಪಿಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನವನ್ನು ಜಪ ಕೇಂದ್ರವನ್ನಾಗಿಸಿ, ‘ಶ್ರೀ ರಘುನಾಯಕ’ ಎಂದು ನಾಮಕರಿಸಿ ಶ್ರೀಗಳು ವಿಶೇಷ ಅನುಗ್ರಹ ಸಂದೇಶ ನೀಡಿದ್ದಾರೆ.

ಶ್ರೀರಾಮ ನಾಮ ಜಪ ಅಭಿಯಾನಕ್ಕೆ ದೇವಳದ ಆಡಳಿತ ಮೊಕ್ತೇಸೇರ ಪಿ.ವಿ.ಶೆಣೈ, ಅರ್ಚಕರಾದ ದಯಾಘನ್ ಭಟ್, ದೀಪಕ್ ಭಟ್ ಸಹಕರಿಸಿದರು. ಆಡಳಿತ ಮಂಡಳಿಯ ಸದಸ್ಯರು, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜಪ ಕಮಿಟಿ ಸದಸ್ಯರು, ಯುವಕ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯೆಯರು ಮತ್ತು ಭಕ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಸಮಾಜದ ಜನರಿಗೆ ಅವಕಾಶ

ಮೇ 18ರವರೆಗೆ ಪ್ರತಿದಿನ ಸಂಜೆ 4ರಿಂದ 5:30ರ ವರೆಗೆ, ಮೇ 19ರಿಂದ ಪ್ರತಿದಿನ ಸಂಜೆ 5:45ರಿಂದ 7ರವರೆಗೆ, ಪ್ರತಿ ಭಾನುವಾರ ಬೆಳಗ್ಗೆ 9:30ರಿಂದ 11ರ ವರೆಗೆ ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಜಪ ಆಯೋಜಿಸಲಾಗಿದೆ. ಈ ಅಭಿಯಾನಕ್ಕೆ ಉಡುಪಿಯವರಷ್ಟೇ ಅಲ್ಲದೆ, ಸಮೀಪದ ಊರುಗಳ ಮಂದಿಗೂ ಪಾಲ್ಗೊಳ್ಳಲು ಅವಕಾಶವಿದೆ ಎಂದು ಶ್ರೀರಾಮ ನಾಮ ಜಪ ಕಮಿಟಿ ತಿಳಿಸಿದೆ.