ಜಿಲ್ಲೆ

ಉಡುಪಿಯಲ್ಲಿಂದು ಸರಳ ಕೃಷ್ಣಾಷ್ಟಮಿ

Udupi

ಉಡುಪಿ: ಪೊಡವಿಗೊಡೆಯ ಕೃಷ್ಣನ ಊರಲ್ಲಿ ಸೆ.10ರಂದು ಕೃಷ್ಣಾಷ್ಟಮಿ. ಈ ಬಾರಿ ಕರೊನಾ ಹಾವಳಿ ಕಾರಣಕ್ಕೆ ಸರಳ ಆಚರಣೆ ನಡೆಯಲಿದ್ದು, ಸಾಂಪ್ರದಾಯಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಳಗ್ಗೆ 7ರಿಂದ 9 ಗಂಟೆವರೆಗೆ ಕೃಷ್ಣಾಷ್ಟಮಿ ಪ್ರಯುಕ್ತ ಕೃಷ್ಣ ದೇವರಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ನೆರವೇರಿಸುವರು. ಸಾಯಂಕಾಲ ರಾಜಾಂಗಣದಲ್ಲಿ ಪ್ರವಚನ ಇರಲಿದೆ. ರಾತ್ರಿ ಸಂಸ್ಕೃತ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ರಾತ್ರಿ 10ಕ್ಕೆ ಕೃಷ್ಣ ಪೂಜೆ ಪ್ರಾರಂಭ, 12.16ಕ್ಕೆ ಕೃಷ್ಣಾರ್ಘ್ಯ ಪ್ರದಾನ ನೆರವೇರಲಿದೆ. ವಿವಿಧ ಮಠಾಧೀಶರು ಹಾಗೂ ಮಠಗಳ ಸಿಬ್ಬಂದಿ ಮಾತ್ರ ಅರ್ಘ್ಯ ಪ್ರದಾನದಲ್ಲಿ ಪಾಲ್ಗೊಳ್ಳುವರು.

11ರಂದು ಬೆಳಗ್ಗೆ ಮಹಾಪೂಜೆ, ಮಧ್ಯಾಹ್ನ 3 ಗಂಟೆಗೆ ವಿಟ್ಲಪಿಂಡಿ ರಥೋತ್ಸವ ಪ್ರಾರಂಭ. ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ತೇರಿನಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ರಥಗಳೂ ಜತೆಗಿರಲಿವೆ.

ನಾಳೆ ಉಡುಪಿ ರಥಬೀದಿ ಪ್ರವೇಶ ನಿಷೇಧ

ಕೃಷ್ಣಾಷ್ಟಮಿ ಪ್ರಯುಕ್ತ ಸೆ.11ರಂದು ಮಧ್ಯಾಹ್ನ 3ರಿಂದ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದ್ದು, ಜನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಮಧ್ಯಾಹ್ನ 12.30ರಿಂದ ಸಾಯಂಕಾಲ 5.30ರವರೆಗೆ ರಥಬೀದಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದ್ದಾಗಿ ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಆಶಯದಂತೆ ಕೃಷ್ಣ ಪ್ರಸಾದ ವಿತರಣೆಗಾಗಿ ಮಠದಲ್ಲಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿ ತಯಾರಿಸಲಾಗುತ್ತಿದೆ.

ಕೃಷ್ಣನ ಅಧ್ಯಾತ್ಮ ಸಂದೇಶ: ಭಗವಂತನ ನೆನಪು ಸದಾ ಇರಬೇಕು. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಶೇಷ ಚಿಂತನೆ ಮಾಡಬೇಕು. ಕೃಷ್ಣನ ಚಿಂತನೆ ಹೆಚ್ಚಾಗಲಿ ಎಂಬ ಉದ್ದೇಶದಿಂದ ಮಕ್ಕಳಿಗೆ ಕೃಷ್ಣ ವೇಷ ಹಾಕುತ್ತೇವೆ. ಇದರಿಂದ ಆತನ ಮಹಿಮೆಗಳ ಜಾಗೃತಿ ಮೂಡುತ್ತದೆ. ಶ್ರೀಕೃಷ್ಣ ಕಾಲೀಯ ಮರ್ಧನ ಮಾಡಿದ ಘಟನೆ ನಮಗೆ ಸಂದೇಶ ನೀಡುತ್ತದೆ. ಹೆಡೆಯ ಮೇಲೆ ನೃತ್ಯ ಮಾಡಿದ್ದರಲ್ಲಿ ಅಧ್ಯಾತ್ಮ ಸಂದೇಶವಿದೆ. ಕಾಲೀಯನಿಗೆ ಅಹಂಕಾರವಿತ್ತು. ಕೃಷ್ಣ ತುಳಿದಾಗ ಪಾದದ ಚಿಹ್ನೆಗಳು ಮೂಡಿದವು. ಬಳಿಕ ಕಾಲೀಯ ಶರಣಾಗತನಾದ. ಇದರಿಂದ ಆತನಿಗೆ ರಕ್ಷಣೆಯೂ ಸಿಕ್ಕಿತು. ಇದೇ ರೀತಿ ನಮ್ಮ ತಲೆಯಲ್ಲೂ ಕೃಷ್ಣನ ಬಗ್ಗೆ ಜ್ಞಾನ ಮೂಡಿದರೆ ನಮಗೆ ರಕ್ಷಣೆ ಲಭಿಸುತ್ತದೆ. ಜೀವನದಲ್ಲಿ ನಾವೆಲ್ಲರೂ ಭಕ್ತಿಯ ಸಂಕೇತವಾದ ವಸುದೇವ-ದೇವಕಿಯರಾಗಬೇಕು. ಇದರಿಂದ ದೇವರು ಒಲಿಯುತ್ತಾನೆ.

- ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠ, ಕೃಷ್ಣ ಮಠ, ಉಡುಪಿ