ಜಿಲ್ಲೆ

ಉಡುಪಿ ಕೃಷ್ಣಜಯಂತಿ ಖರೀದಿ ಭರಾಟೆ ಜೋರು

ಗೋಪಾಲಕೃಷ್ಣ ಪಾದೂರ್

ಉಡುಪಿ: ಕೃಷ್ಣಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಬಿರುಸು ಪಡೆದಿದೆ. ರಥಬೀದಿ ಸೇರಿದಂತೆ ನಗರದ ವಿವಿಧೆಡೆ ಖರೀದಿ ಭರಾಟೆ ಜೋರಾಗಿದೆ.

ವಿಶೇಷವಾಗಿ ರಥಬೀದಿಯಲ್ಲಿ ಹಾಸನ, ಚಿಕ್ಕಮಗಳೂರು ಮುಂತಾದ ಕಡೆಯಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಸಾಲು ಸಾಲಾಗಿ ವ್ಯಾಪಾರಕ್ಕೆ ನಿಂತಿದ್ದು, ಸೇವಂತಿಗೆ, ಕಾಕಡ, ತುಳಸಿ ಮಾಲೆ, ಬಿಳಿಸೇವಂತಿಗೆ ಮಾರಾಟಮಾಡುತ್ತಿದ್ದಾರೆ. ಸೇವಂತಿಗೆ ಮಾರಿಗೆ 40 ರಿಂದ 50 ರೂ., ಗುಲಾಬಿ ಮಾಲೆ ಮಾರಿಗೆ 80 ರೂ., ಕಾಕಡ ಮುಳಕ್ಕೆ 20 ರೂ., ತುಳಸಿ ಮಾಲೆ ಮುಳಕ್ಕೆ 20 ರೂ. ನಂತೆ ಮಾರಾಟವಾಗುತ್ತಿದೆ.

ಎಲ್ಲಾ ಓಣಿಗಳಲ್ಲಿ ಅಂಗಡಿಗಳು
ಹೂ, ಹಣ್ಣಿನ ವ್ಯಾಪಾರಿಗಳಲ್ಲದೆ ಆಟಿಕೆ ಸಾಮಗ್ರಿ, ಫ್ಯಾನ್ಸಿ ಅಂಗಡಿಗಳ ಬೀದಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ತೆಂಕಪೇಟೆ, ಬಡಗುಪೇಟೆ, ಸಂಸತ ಕಾಲೇಜು ರಸ್ತೆ, ಸೋದೆ ಮಠದ ಓಣಿ ಹೀಗೆ ರಥಬೀದಿ ಸಂಪರ್ಕಿಸುವ ಎಲ್ಲಾ ಒಳರಸ್ತೆಗಳಲ್ಲಿ ಬೀದಿ ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದಾರೆ. ನಗರದ ಶ್ರೀಕೃಷ್ಣಮಠ ರಥಬೀದಿಯಲ್ಲಿ ಪೂಜಾ ಸಮಾಗ್ರಿಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿಕೊಂಡಿದ್ದರು. ಉಂಡೆ, ಚಕ್ಕುಲಿ ತಯಾರಿಸಲು ಹಿಟ್ಟುಗಳ ಖರೀದಿಯೂ ಜೋರಾಗಿತ್ತು.

ಕೃಷ್ಣ ವೇಷ ಸ್ಪರ್ಧೆಗೆ 280ಕ್ಕೂ ಅಧಿಕ ನೋಂದಣಿ
ಕೃಷ್ಣ ಜಯಂತಿಯಂದು ಮಧ್ವಾಂಗಣದಲ್ಲಿ ಸೆ.6ರಂದು ಬೆಳಗ್ಗೆ 9.30ರಿಂದ 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಭೋಜನಶಾಲೆ ಮಾಳಿಗೆಯಲ್ಲಿ 4 ರಿಂದ 6 ವರ್ಷ ಮಕ್ಕಳ ಬಾಲಕೃಷ್ಣ ಸ್ಪರ್ಧೆ, ಅನ್ನಬ್ರಹ್ಮದಲ್ಲಿ 7 ರಿಂದ 10 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಮಠದಲ್ಲಿ ಕೃಷ್ಣ ಸ್ಪರ್ಧೆಗೆ 280ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸೆ.7ರಂದು ಕೃಷ್ಣ ಲೀಲೋತ್ಸವ ಬಳಿಕ ಸಾಯಂಕಾಲ ರಾಜಾಂಗಣದಲ್ಲಿ ನಡೆಯುವ ಹುಲಿವೇಷ ಸ್ಪರ್ಧೆ ಹಾಗೂ ಜಾನಪದ ವೇಷ ಸ್ಪರ್ಧೆಯಲ್ಲಿ ಪರ್ಯಾಯ ಶ್ರೀಗಳು ಕಲಾವಿದರನ್ನು ಪುರಸ್ಕರಿಸಲಿದ್ದಾರೆ.

ಕೃಷ್ಣನ ಮೃಣ್ಮಯ ಮೂರ್ತಿ ರಚನೆ
ವಿಟ್ಲಪಿಂಡಿ ಉತ್ಸವದಲ್ಲಿ ರಥದಲ್ಲಿ ಸ್ಥಾಪಿಸಲಾಗುವ ಕೃಷ್ಣನ ಮೃಣ್ಮಯ ಮೂರ್ತಿ ರಚಿಸಲಾಗಿದೆ. ಭಾಗೀರಥಿ ಜಯಂತಿಯಂದು ಕೃಷ್ಣ ಮಠದ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ಹೀಗಾಗಿ ಚಾತುರ್ಮಾಸ ವ್ರತ ಕಾಲದಲ್ಲಿ ಯಾವುದೇ ಉತ್ಸವಗಳು ಇರುವುದಿಲ್ಲ. ಮತ್ತೆ ಉತ್ಥಾನ ದ್ವಾದಶಿಯಂದು ಉತ್ಸವ ಮೂರ್ತಿಯನ್ನು ಹೊರತರಲಾಗುತ್ತದೆ. ರಥೋತ್ಸವಗಳು ಪ್ರಾರಂಭವಾಗುತ್ತವೆ. ಆದರೆ ವಿಟ್ಲಪಿಂಡಿ ಉತ್ಸವದಂದು ರಥೋತ್ಸವ ನಡೆಯುವುದರಿಂದ ಮಣ್ಣಿನ ಮೂರ್ತಿಯನ್ನು ನಿರ್ಮಿಸಿ ಮೆರವಣಿಗೆ ಬಳಿಕ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಶತಮಾನದಿಂದಲೂ ಈ ಸಂಪ್ರದಾಯ ಪಾಲಿಸಲಾಗುತ್ತದೆ.
ಉತ್ಸವ ಮೂರ್ತಿಯನ್ನು ಇಡುವ ಅಟ್ಟೆ ಪ್ರಭಾವಳಿಗೆ ಸೂಕ್ತವಾಗಿ 9 ಇಂಚು ಎತ್ತರದ ಮಣ್ಣಿನ ಮೂರ್ತಿ ನಿರ್ಮಿಸಲಾಗುತ್ತದೆ.

ಪೊಲೀಸ್​ ಭದ್ರತೆ
ಕೃಷ್ಣ ಮಠದಲ್ಲಿ ಅಷ್ಟಮಿ ಅಂಗವಾಗಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭದ್ರತೆ ದೃಷ್ಟಿಯಿಂದ 100ಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಠದ ಮುಂಭಾಗದಲ್ಲಿರುವ ಹೊರಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದ್ದು, 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.