ಜಿಲ್ಲೆ

ವಿದ್ಯುತ್ ಪ್ರಸರಣ ಮಾರ್ಗ ಬದಲಾವಣೆ - ನೋಡಲ್ ಅಧಿಕಾರಿಗೆ ಮನವಿ ಸಲ್ಲಿಕೆ

Mangaluru - Nishantha Narayana

ಪುತ್ತೂರು: ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದಿಂದ ಅಡಕೆ, ತೆಂಗು, ರಬ್ಬರ್, ಗೇರು ಕೃಷಿಗೆ ಹಾನಿಯಾಗುವ ಬಗ್ಗೆ ನೋಡಲ್ ಅಧಿಕಾರಿಯಾಗಿರುವ ಸಹಾಯಕ ಆಯುಕ್ತ ಹರ್ಷವರ್ಧನ್ ಅವರಿಗೆ ಕರ್ನಾಟಕ ರೈತ ಸಂಘ ಹಾಗೂ ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯಿಂದ ಮನವಿ ನೀಡಲಾಯಿತು.

ವಿದ್ಯುತ್ ಮಾರ್ಗ ಸುಮಾರು ೪೦ಕ್ಕೂ ಅಧಿಕ ಬಡವರ ಮನೆಯ ಮೇಲೆ ಹಾದುಹೋಗುವ ಸಂಭವವಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದೆ ಕುಟುಂಬ ಬೀದಿಗೆ ಬೀಳುವ ಸಾಧ್ಯತೆಯಿದೆ. ವಿದ್ಯುತ್ ಮಾರ್ಗದಿಂದ ಹೊರಸೂಸುವ ಎಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ನಿಂದ ಸುಮಾರು ೨ ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ತಮಿಳುನಾಡು ಭಾಗದಲ್ಲಿ ವೈಜ್ಞಾನಿಕವಾಗಿ ಕಂಡುಕೊಂಡಿದ್ದಾರೆ. ಉಡುಪಿಯಿಂದ ಸಾರಡ್ಕವರೆಗಿನ ಕೃಷಿ ಜಮೀನಿಗೆ ಕಂಪನಿಯವರು ಕಾಲು ಇಡದ ರೀತಿಯಲ್ಲಿ ನೋಡಿಕೊಳ್ಳಬೇಕು. ಕಾನೂನಿನಲ್ಲಿ ಮಾರ್ಗ ಬದಲಾವಣೆಯ ಅವಕಾಶವನ್ನು ನೀಡಲಾಗಿದ್ದು, ಈ ಬಗ್ಗೆ ಸಬಂಧಪಟ್ಟವರಿಗೆ ಮನವರಿಕೆ ಮಾಡಬೇಕೆಂಬ ಬೇಡಿಕೆಯನ್ನು ಸಲ್ಲಿಸಲಾಯಿತು.

ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಂತ್ರಸ್ತ ರೈತ ಶ್ಯಾಮ್ ಪ್ರಸಾದ್ ವನಭೋಜನ ಮತ್ತಿತರರು ಉಪಸ್ಥಿತರಿದ್ದರು.