ಉಡುಪಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಗುರುವಾರ 29 ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ಮೂರು ಪ್ರಕರಣಗಳಿಂದ ಹಸಿರು ವಲಯ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದ ಉಡುಪಿಯಲ್ಲಿ ಸದ್ಯ ಪಾಸಿಟಿವ್ ಪ್ರಕರಣ 149ಕ್ಕೆ ಏರಿಕೆಯಾಗಿದ್ದು ಅತಿ ಹೆಚ್ಚು ಸೋಂಕಿತರ ಟಾಪ್ ಐದು ಜಿಲ್ಲೆಯೊಳಗೆ ಸ್ಥಾನ ಪಡೆದಿದೆ.
ಮಹಾರಾಷ್ಟ್ರದಿಂದ ಆಗಮಿಸಿದ 26, ತೆಲಂಗಾಣದ 2, ಕೇರಳದಿಂದ ಬಂದ ಒಬ್ಬರಲ್ಲಿ ಗುರುವಾರ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. 20 ಪುರುಷರು, 8 ಹೆಂಗಸರು, ಒಬ್ಬ ಬಾಲಕಿ ಇದ್ದಾರೆ. ಕುಂದಾಪುರ 23, ಕಾರ್ಕಳದ ಐವರು ಹಾಗೂ ಉಡುಪಿಯ ಒಬ್ಬರು ಸೇರಿದ್ದಾರೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
298 ವರದಿ ನೆಗೆಟಿವ್: ಗುರುವಾರ 298 ಜನರ ವರದಿ ನೆಗೆಟಿವ್ ಬಂದಿದೆ. ಇಲ್‌ನೆಸ್‌ಗೆ ಸಂಬಂಧಿಸಿ 2, ಹಾಟ್‌ಸ್ಪಾಟ್‌ನಿಂದ ಬಂದವರು 18 ಮಂದಿಯ ಮಾದರಿಯನ್ನು ಗುರುವಾರ ಸಂಗ್ರಹಿಸಲಾಗಿದೆ. ಐಸೋಲೇಶನ್ ವಾರ್ಡ್‌ನಿಂದ 29 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
6,707 ವರದಿ ಪೆಂಡಿಂಗ್: ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 10,965 ಮಂದಿಯ ಗಂಟಲು ಸ್ರಾವ ಮಾದರಿ ಸಂಗ್ರಹಿಸಲಾಗಿದ್ದು, 149 ಪಾವ್ವ್, 4109 ನೆಗೆಟಿವ್ ವರದಿ ಬಂದಿದೆ. ಬೇರೆ ಬೇರೆ ಪ್ರಯೋಗಾಲಯಗಳಿಗೆ ರವಾನೆಯಾಗಿರುವ 6,707 ಮಂದಿಯ ವರದಿಗೆ ಕಾಯಲಾಗುತ್ತಿದೆ.
ಗರ್ಭಿಣಿ, ಜಿಪಂ ಸಿಬ್ಬಂದಿ ನೆಗೆಟಿವ್: ಓರ್ವ ಗರ್ಭಿಣಿ ಮತ್ತು ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದ ರಿಪೋರ್ಟ್ ಗುರುವಾರ ನೆಗೆಟಿವ್ ಬಂದಿದೆ. ಈ ಇಬ್ಬರಿಗೂ ತಾಂತ್ರಿಕ ಗೊಂದಲದಿಂದ ಪಾಸಿಟಿವ್ ವರದಿ ಬಂದಿತ್ತು ಎನ್ನಲಾಗಿದೆ. ಇವರ ಪಾಸಿಟಿವ್ ವರದಿ ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿತ್ತು. ಪುನಃ ನಡೆಸಿದ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್ ಬಂದಿದ್ದು, ಜಿಲ್ಲಾ ಪಂಚಾಯಿತಿ ಸಿಬ್ಬಂದಿಯ ಮಾದರಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದ್ದು, ತಾಂತ್ರಿಕ ಗೊಂದಲದಿಂದ ಸಮಸ್ಯೆ ಎದುರಾಗಿತ್ತು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.