ಜಿಲ್ಲೆ

ಸ್ವಾತಂತ್ರ್ಯವೆಂದರೆ ಸ್ವಚ್ಛಂದವಲ್ಲ: ಸಚಿವ ಅಂಗಾರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸ್ವಾತಂತ್ರ್ಯೋತ್ಸವ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಅತ್ಯಂತ ಮಹತ್ವದ ದಿನ. ಸ್ವಾತಂತ್ರ್ಯವೆಂದರೆ ಸ್ವಚ್ಛಂದವಲ್ಲ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವವನು ಮಾತ್ರ ತನ್ನ ಸ್ವಾತಂತ್ರಕ್ಕಾಗಿ ಹಕ್ಕು ಮಂಡಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಸೋಮವಾರ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣಗೈದು, ಅವರು ಸಂದೇಶ ನೀಡಿದರು. ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಬದುಕಿನ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಸಮರ್ಪಣಾ ಭಾವದಿಂದ ಭಾರತ ಮಾತೆಯ ದಾಸ್ಯದ ವಿಮೋಚನೆಗಾಗಿ ಶ್ರಮಿಸಿದ ನಮ್ಮ ಪೂರ್ವಜರ ಯಶೋಗಾಥೆ ಇಂದಿನ ತಲೆಮಾರಿಗೆ ದಾರಿದೀಪ. ಯುವಜನರು ಅವುಗಳನ್ನು ತಿಳಿಯುವ ಮೂಲಕ ಸ್ವಾತಂತ್ರ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು.

ಭಾರತದಲ್ಲಿ ಮಾತ್ರ ವೈಚಾರಿಕ ಸ್ವಾತಂತ್ರ್ಯ
ದೇಶದ ಪರಂಪರೆಯನ್ನು ಗಮನಿಸಿದರೆ ಭಾರತ ಸರ್ವಸಮೃದ್ಧ ದೇಶವಾಗಿತ್ತು. ವಿಶ್ವದ ಎಲ್ಲ ನಾಗರಿಕತೆಗಳ ಮಂಚೂಣಿಯಲ್ಲಿ ಭಾರತ ಸ್ಥಾನ ಪಡೆದಿತ್ತು. ವೇದ ಉಪನಿಷತ್ತುಗಳ ನೆಲೆವೀಡಾಗಿತ್ತು. ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಚಿಂತನೆ, ಚರ್ಚೆಗಳನ್ನು ನಡೆಸುತ್ತಿದ್ದ ಋಷಿಮುನಿಗಳಿದ್ದರು. ಪ್ರಕೃತಿಯ ಪ್ರಯೋಜನವನ್ನು ಕಂಡುಕೊಂಡಿದ್ದ ಆಯುರ್ವೇದ ಮತ್ತು ಯೋಗ ತಜ್ಞರಿದ್ದರು. ನಳಂದಾ ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳಷ್ಟೇ ಅಲ್ಲದೆ ಗ್ರಾಮ ಗ್ರಾಮಗಳಲ್ಲಿಯೂ ಶಿಕ್ಷಣ ವ್ಯವಸ್ಥೆ ಇತ್ತು. ಲೋಹ ಮತ್ತು ಶಿಲ್ಪ ಕಲೆಗಳಲ್ಲಿ ಪರಮೋಚ್ಚ ಮಟ್ಟದಲ್ಲಿ ಸಾಧನೆ ಮಾಡಿ ದೇವಾಲಯಗಳನ್ನು ಕಟ್ಟಿದ ಕಲಾಪರಂಪರೆ, ಸಂಗೀತ ನೃತ್ಯಗಳ ಶಾಸ್ತ್ರಗಳನ್ನೇ ರಚಿಸಿದ್ದ ವಿದ್ವಾಂಸರಿದ್ದರು. ಬೇರೆಲ್ಲಿಯೂ ಇಲ್ಲದ ವೈಚಾರಿಕ ಸ್ವಾತಂತ್ರ್ಯ ಭಾರತದಲ್ಲಿತ್ತು. ಹಾಗಾಗಿಯೇ ಇಲ್ಲಿ ಜೈನ, ಬೌದ್ಧ, ಚಾರ್ವಾಕ, ದೈತ, ಅದೈತ, ವಿಶಿಷ್ಟಾದ್ವತ, ಬಸವ ಪಂಥ, ಭಕ್ತಿ ಪಂಥ ಮುಂತಾದ ಹೊಸ ಹೊಸ ಅಧ್ಯಾತ್ಮಿಕ ಮಾರ್ಗಗಳು ದೊರಕಿದವು. ಆದರೆ ದೇಶದ ಸಂಸ್ಕೃತಿ ಹಾಳು ಮಾಡಿದ ವಿದೇಶೀ ಆಕ್ರಮಣಕಾರರು ಮತ್ತು ಬ್ರಿಟೀಷರು ಸಾಮ್ರಾಜ್ಯಶಾಹಿ ಕುಟಿಲ ನೀತಿಗಳಿಂದ ನಮ್ಮನ್ನು ಆಳಿದ್ದರು ಎಂದರು.

ಬ್ರಿಟಿಷರ ಅಧೀನದಲ್ಲಿದ್ದಾಗ ನಮ್ಮ ಅಭಿವೃದ್ಧಿಯ ಯೋಜನೆಗಳನ್ನು ನಾವು ರೂಪಿಸುವಂತಿರಲಿಲ್ಲ. ಆದರೆ ಈಗ ನಾವೇ ನಮ್ಮ ಪ್ರಗತಿಯ ರೂವಾರಿಗಳಾಗಿದ್ದೇವೆ. ಕಳೆದ ೭೪ ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಸಾಧಿಸುತ್ತ ಬಂದಿದ್ದೇವೆ. ಮುಂದೆಯೂ ಪ್ರಮುಖ ಯೋಜನೆಗಳು ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪುಗೊಳ್ಳುತ್ತವೆ ಎಂದು ಹೇಳಿದರು.

ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಇಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ವೈಯ್ಟ ಲಿಫ್ಟರ್ ಗುರುರಾಜ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಅಂಗವಿಕಲ ಕಲ್ಯಾಣ ಇಲಾಖೆಯಿಂದ ಅರ್ಹಫಲಾನುಭವಿಗಳಿಗೆ ತ್ರಿಚಕ್ರ ವಾಹನ, ೨೦೨೦-೨೧ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ೧೦ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.