ಜಿಲ್ಲೆ

ಉಡುಪಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ 2.08 ಲಕ್ಷ ನೋಂದಣಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯದಲ್ಲಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿ.ಪಿ.ಎಲ್​ ಮತ್ತು ಎ.ಪಿ.ಎಲ್​ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಯೋಜನೆಯ ಅರ್ಹ ಫಲಾನುಭವಿ. ಜಿಲ್ಲೆಯಲ್ಲಿ 2,56,850 ಕುಟುಂಬದ ಯಜಮಾನಿಯೆಂದು ನಮೂದಾಗಿರುವ ಪಡಿತರ ಚೀಟಿಗಳಿದ್ದು, ಜುಲೈ 19 ರಿಂದ ಈವರೆಗೆ ಒಟ್ಟು 2,08,695 ಫಲಾನುಭವಿಗಳು ನೋಂದಾಯಿಸಿದ್ದು, ಶೇ.81.25 ಸಾಧನೆ ಮಾಡಲಾಗಿದೆ.

ಆ. 30 ರಿಂದ ನಗದು ಸೌಲಭ್ಯವನ್ನು ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದ್ದು, ಮೈಸೂರಿನಲ್ಲಿ ರಾಜ್ಯಮಟ್ಟದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಏಕಕಾಲದಲ್ಲಿ ನಗರ ಸ್ಥಳಿಯ ಸಂಸ್ಥೆಗಳ ಪ್ರತಿ ವಾರ್ಡ್​ಗಳಲ್ಲಿ ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ಥಳಿಯವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

ಜಿಲ್ಲೆಯ 155 ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನದಲ್ಲಿ ಹಾಗೂ ಪ್ರತಿ ನಗರ ಸ್ಥಳಿಯ ಸಂಸ್ಥೆಯ 52 ವಾರ್ಡ್​ಗಳಲ್ಲಿ ಹಾಗೂ 6 ತಾಲೂಕು ಕೇಂದ್ರಗಳಲ್ಲಿ ಮತ್ತು 1 ಜಿಲ್ಲಾ ಕೇಂದ್ರದಲ್ಲಿ ಸೇರಿದಂತೆ ಒಟ್ಟು 214 ಸ್ಥಳಗಳಲ್ಲಿ ಏಕ ಕಾಲದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಆಗಿರುವ ಬಗ್ಗೆ ಏಕಕಾಲದಲ್ಲಿ ಅವರ ಮೊಬೈಲ್​ ಸಂಖ್ಯೆಗೆ ಸಂದೇಶ ರವಾನಿಸಿ, ಮಂಜೂರಾತಿ ಪತ್ರ ಗೃಹಲಕ್ಷ್ಮಿ ಗುರುತಿನ ಚೀಟಿ ವಿತರಿಸಲಾಗುತ್ತದೆ. ಮೈಸೂರು ಕಾರ್ಯಕ್ರಮದ ಸ್ಥಳದಿಂದ ವಂಡ್ಸೆ ಗ್ರಾಮ ಪಂಚಾಯಿತಿ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯ ಯುಬಿಎಂಸಿ ಸಭಾಂಗಣದಲ್ಲಿ ಫಲಾನುಭವಿಗಳೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.

ಫಲಾನುಭವಿಗಳು ತಮ್ಮ ಮನೆಗಳ ಮುಂದೆ ಹಾಗೂ ಗೃಹಲಕ್ಷ್ಮಿ ನಡೆಯುವ ಸ್ಥಳಗಳಲ್ಲಿ ಯೋಜನೆಯ ಬಗ್ಗೆ ರಂಗೋಲಿ ಬಿಡಿಸಿ, ನಾ ಗೃಹಲಕ್ಷ್ಮಿ ನಾ ನಾಯಕಿ ಹಾಗೂ ಗೃಹಲಕ್ಷ್ಮಿ ಲೋಗೋವನ್ನು ಚಿತ್ರಿಸಬಹುದು. ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಲಾನುಭವಿಗಳು ಹಾಗೂ ರಂಗೋಲಿ ಬಗ್ಗೆ ಮೂರು ನಿಮಿಷಗಳ ವೀಡಿಯೋ ಸಿದ್ಧಪಡಿಸಿ, ಗೃಹಲಕ್ಷ್ಮಿ ಯೂಟ್ಯೂಬ್​ ಚಾನೆಲ್​ಗೆ ಅಪ್​ಲೋಡ್​ ಮಾಡಬಹುದಾಗಿದೆ.