ಪ್ರಶಾಂತ ಭಾಗ್ವತ, ಉಡುಪಿ
ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಸಾಧನೆ ಮೆರೆದಿತ್ತು. ಈ ಬಾರಿಯೂ ಮೇಲ್ಪಂಕ್ತಿಯಲ್ಲಿ ಮಿಂಚಲು ಶಿಕ್ಷಣ ಇಲಾಖೆ ನಿರಂತರ ಪ್ರಯತ್ನ, ಶ್ರಮ ವಹಿಸುತ್ತಿದ್ದು, ಪ್ರಥಮ ಸ್ಥಾನ ಕೈತಪ್ಪದಂತೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಲಿಕೆಯೆಂಬ ಭದ್ರ ಕಾವಲು ಹಾಕಿದೆ.
ಮಕ್ಕಳಿಗೆ ಭಯ ನಿವಾರಿಸಲು ವಾರ್ಷಿಕ ಪರೀಕ್ಷೆಯಂತೆಯೇ ದಿನವೂ ಬೆಳಗ್ಗೆ ಒಂದು ವಿಷಯ, ಮಧ್ಯಾಹ್ನ ಇನ್ನೊಂದು ವಿಷಯದ ಪರೀಕ್ಷೆ ಮಾಡಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ವಾರ್ಷಿಕ ಪರೀಕ್ಷೆಯ ರೀತಿಯಲ್ಲಿ ಅನ್ಯ ಶಾಲೆಗಳಲ್ಲಿ 'ಕಲ್ಪಿತ ಪರೀಕ್ಷೆ'ಗೆ ಇಲಾಖೆ ಸಜ್ಜಾಗಿದೆ. ಪ್ರಶ್ನೆ ಪತ್ರಿಕೆ ನೀಡಿ, ಅಲ್ಲೇ ಉತ್ತರ ಬರೆದು, ಅಲ್ಲಿಯೇ ಅಂಕವನ್ನೂ ನೀಡಲಾಗುತ್ತದೆ. ಅದರಿಂದ ತಾವೆಲ್ಲಿ ತಪ್ಪಿದ್ದೇವೆ, ಯಾವುದು ತಪ್ಪು ಬರೆದಿದ್ದೇವೆ ಎನ್ನುವುದು ವಿದ್ಯಾರ್ಥಿಗಳಿಗೇ ಮನದಟ್ಟಾಗುತ್ತದೆ ಎನ್ನುತ್ತಾರೆ ಡಿಡಿಪಿಐ ಕೆ.ಗಣಪತಿ.
ಕಲಿಕೆಯಲ್ಲಿ ಹಿಂದುಳಿದ ಮತ್ತು ಕಲಿಕೆಯಲ್ಲಿ ಮುಂದಿರುವವರಿಗೂ ವಿಶೇಷ ತರಗತಿ, ಕಡಿಮೆ ಅಂಕ ಪಡೆದವರು ಹೆಚ್ಚು ಅಂಕ ಗಳಿಸುವಂತೆ ಮಾಡುವುದು, ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಶೇ.100 ಅಂಕ ಗಳಿಸುವಂತೆ ಸಜ್ಜು ಮಾಡುತ್ತಿದ್ದೇವೆ. 'ಈಚ್ವನ್ ಟೀಚ್ ವನ್' ಎಂಬ ವಿಶೇಷ ಕಲ್ಪನೆಯಲ್ಲಿ ಸ್ನೇಹಿತನೇ ತನ್ನ ಮಿತ್ರನಿಗೆ ಕಲಿಸುವ ಮೂಲಕ ಹೆಚ್ಚು ಅಂಕ ಗಳಿಸಲು 'ಮೋಟಿವೇಷನ್ ಕ್ಲಾಸ್' ಮಾಡಿದ್ದೇವೆ. | ಗಣಪತಿ ಕೆ. ಡಿಡಿಪಿಐ, ಉಡುಪಿ ಜಿಲ್ಲೆ
ಖಾಸಗಿ ಶಾಲೆಗಳಲ್ಲಿ ಅಂಕ ಆಧಾರಿತವಾಗಿ ಮೂರು ಗುಂಪುಗಳಾಗಿ ವಿಭಾಗಿಸಿದ್ದೇವೆ. ಪ್ರತಿ ಮಕ್ಕಳಿಗೂ ಪಶ್ನೆ ಪತ್ರಿಕೆ ಬಿಡಿಸುವ, ಪ್ರತಿದಿನವೂ ಪ್ರಮುಖ ಪ್ರಶ್ನೆ ನೀಡಿ ಮರುದಿನ ಪೂರಕ ಕಿರು ಪರೀಕ್ಷೆ, ಹಳೆಯ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ, ದಿನವೂ ನಸುಕಿನ 5:30ಕ್ಕೆ ಪಾಲಕರಿಗೆ ಕರೆ ಮಾಡಿ ವಿದ್ಯಾರ್ಥಿಗಳ ಅಭ್ಯಾಸದ ವಿಚಾರಣೆ, ಬೆಳಗ್ಗೆ ಶಾಲೆ ಆರಂಭದ ಮೊದಲು ಹಾಗೂ ಸಂಜೆ ಶಾಲೆ ಬಿಟ್ಟ ಬಳಿಕ ಹೆಚ್ಚುವರಿ ತರಗತಿ ನಡೆಸುತ್ತಿದ್ದೇವೆ. | ಕೆ.ವಿನಾಯಕ ಕಿಣಿ. ಮುಖ್ಯೋಧ್ಯಾಪಕ, ಇಂದ್ರಾಣಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಉಡುಪಿ