ಆರಿ ವರ್ಕ್ ಕೌಶಲದಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆ
ನೋಬೆಲ್, ಒಸ್ಕರ್ಸ್ ರೆಕಾರ್ಡ್ನಲ್ಲಿ ಕರ್ನಾಟಕ ಪಾರಮ್ಯ
ಅನೇಕ ವಿಶ್ವ ದಾಖಲೆಗಳು ಭಾರಿ ಅಬ್ಬರದೊಂದಿಗೆ ದೇಶದ ಗಮನ ಸೆಳೆಯುತ್ತದೆ. ಆದರೆ, ಯಾವುದೇ ಸದ್ದಿಲ್ಲದೆ ಹೊಲಿಗೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಹಾಗೂ ಉಡುಪಿ ಜಿಲ್ಲೆಯ ನಾರಿಯರು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನಲ್ಲಿ ಆ.10ರಂದು ನಡೆದ ಅಂತಾರಾಷ್ಟ್ರೀಯ ಆರಿ ಕಾರ್ಮಿಕರ 2ನೇ ಸಮ್ಮೇಳನದ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಕನಾಟಕ ರಾಜ್ಯವು ನೋಬೆಲ್ ವರ್ಲ್ಡ್ ರೆಕಾರ್ಡ್ ಮತ್ತು ಒಸ್ಕರ್ಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸಮೂಹ ದಾಖಲೆಯೊಂದಿಗೆ ಪರಾಕ್ರಮ ಮೆರೆದಿದೆ.
ಉಡುಪಿ ಜಿಲ್ಲೆ ಫಸ್ಟ್
ಸ್ವಾತಂತ್ರ್ಯೋತ್ಸವದ ನಿಮಿತ್ತ ಕೈ ಹೊಲಿಗೆ (ಆರಿ ವರ್ಕ್)ಯಲ್ಲಿ ದಾಖಲೆ ಮಾಡಲು 1 ಗಂಟೆ 30 ನಿಮಿಷ ಅವಧಿಯ ಇಂಡಿಪೆಂಡೆನ್ಸ್ ಡೇ ವಿಷಯ ಸ್ಪರ್ಧೆ ನೀಡಲಾಗಿತ್ತು. ಸಮಯದೊಳಗೆ ಪೂರ್ಣಗೊಳಿಸಿದ ಟಾಪ್ ಟೆನ್ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ 6ನೇ ಸ್ಥಾನ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ.
ಕುಂದಾಪುರದ ಅಶ್ವಿನಿ ಪ್ರಥಮ
ಮೂರು ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳಲ್ಲಿ ಕುಂದಾಪುರದ ಆರತಿರಾಜ್ ಟೆನಿಂಗ್ ಸೆಂಟರ್ನ ವಿದ್ಯಾರ್ಥಿನಿ ಅಶ್ವಿನಿ ಖಾರ್ವಿ ತಾಸಿನೊಳಗೆ ಹೊಲಿಗೆ ಪೂರ್ಣಗೊಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಉಡುಪಿಯ ಸಿದ್ಧಿ ಸ್ವೀಯಿಂಗ್ ಸ್ಕೂಲ್ನ ವಿದ್ಯಾರ್ಥಿನಿ ಸಹನಾ 1 ಗಂಟೆ 10 ನಿಮಿಷದಲ್ಲಿ ಪೂರ್ಣಗೊಳಿಸಿ 6ನೇ ಸ್ಥಾನದೊಂದಿಗೆ ದಾಖಲೆ ನಿರ್ಮಿಸಿದ್ದಾರೆ.
ದಿಗ್ಗಜ ತೀರ್ಪುಗಾರರು
ಸ್ಪರ್ಧೆಯ ತೀರ್ಪುಗಾರರಾಗಿ ವಿದೇಶದ ಹೊಲಿಗೆ ತಜ್ಞರು ಪಾಲ್ಗೊಂಡಿದ್ದರು. ಒಸ್ಕರ್ಸ್ ತೀರ್ಪುಗಾರರಾಗಿ ದಕ್ಷಿಣ ಕೋರಿಯಾದ ಯೂನ್ ಜೂನ್ ಸ್ಯೂನ್, ಚಾಸಂಗ್ ಯೂನ್, ಚಾಸಂಗ್ ಗುಕ್ ಪಾಲ್ಗೊಂಡಿದ್ದರು. ನೋಬೆಲ್ ಪ್ರಶಸ್ತಿಗೆ ಹೈದರಾಬಾದ್ನ ವಿಭಾಗದಿಂದ ಡಾ. ಲಾವಣ್ಯಾ ಜಯಕರ್, ದೀಪೇಶ್ ವಿಶ್ವನಾಥ ವೋಯರ್ ಪಾಲ್ಗೊಂಡಿದ್ದರು. ಕರ್ನಾಟಕದ ಆರಿ ಕೌನ್ಸಿಲ್ನ ಮುಖ್ಯಸ್ಥ ಡಾ. ಅರವಿಂದ ಲಕ್ಷ್ಮೀನಾರಾಯಣನ್ ಇದ್ದರು. ಕೀರ್ತನಾ ಎನ್. ನೇತೃತ್ವ ವಹಿಸಿದ್ದರು.
ಆರಿ ಕಲಾಶ್ರೀ, ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ
ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಅನುಪಮಾ ವೆಂಕಟೇಶ ಹಾಗೂ ದಕ ಜಿಲ್ಲೆಯ ಸೌಭಾಗ್ಯಾ ರಾಜೇಶ್ ಅವರು ಆರಿ ಕಲಾಶ್ರೀ ಪ್ರಶಸ್ತಿ ಗಳಿಸಿದ್ದಾರೆ. ಉಡುಪಿಯ ಸಿದ್ಧಿ ಸ್ವೀಯಿಂಗ್ ಸ್ಕೂಲ್ನ ಶಿಕ್ಷಕಿ ರಮ್ಯಾ ಎ.ಸಿ. ಹಾಗೂ ಸುಜಾತಾ ಕೋಟ್ಯಾನ್, ದೀಕ್ಷಾ ಸುವರ್ಣ, ಪೂಜಾ, ಸಬಿತಾ ಪದ್ಮಿನಿ, ನಿಷಾ, ವಿಶಾಲಾ, ವಂದನಾ ಪಿ. ಶೆಟ್ಟಿ, ರಂಜಿನಿ ಪ್ರಭು, ರೇಖಾ ಪಿ. ಗಾಣಿಗೇರ್ ಇವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು. ಉಡುಪಿಯ ಸುಮೇಧಾ ಫ್ಯಾಷನ್ಸ್, ದ.ಕ. ಜಿಲ್ಲೆಯ ರಚನಾ ಡಿಸೈನರ್ ಸಂಸ್ಥೆಗೆ ಉತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಆರಿ ವರ್ಕರ್ಸ್ ಕೌನ್ಸಿಲ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕರ್ನಾಟಕದಿಂದ 3 ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯಿಂದ 278 ಮಹಿಳೆಯರು, ದಕ್ಷಿಣ ಕನ್ನಡದಿಂದ 128 ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರಿಗೆ ಉತ್ತೇಜನ ನೀಡಲು ಸಮ್ಮೇಳನ ಆಯೋಜಿಸಲಾಗಿತ್ತು.
| ಅನುಪಮಾ ವೆಂಕಟೇಶ. ಉಡುಪಿ ಜಿಲ್ಲಾ ಆರಿ ಕೌನ್ಸಿಲ್ನ ಕಾರ್ಯದರ್ಶಿ
ನಮ್ಮ ಸಿದ್ಧಿ ಸ್ವೀಯಿಂಗ್ ಸ್ಕೂಲ್ ಉಡುಪಿಯ 24 ವಿದ್ಯಾರ್ಥಿಗಳು ನೊಬೆಲ್ ಹಾಗೂ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲಿಸಿ ಪ್ರಮಾಣ ಪತ್ರ, ಪದಕ ಗಳಿಸಿದ್ದಾರೆ. ತನ್ಮೂಲಕ ಭಾರತೀಯ ಆರಿ ಕಾರ್ಮಿಕರ ಫೆಡರೇಶನ್ನಲ್ಲಿಯೂ ನೋಂದಾಯಿತರಾಗಿದ್ದಾರೆ.
| ರಮ್ಯಾ ಎ.ಸಿ. ಉತ್ತಮ ಶಿಕ್ಷಕಿ ಪ್ರಶಸ್ತಿಯ ಸಾಧಕಿ, ಉಡುಪಿ