ವಿಜಯವಾಣಿ ಸುದ್ದಿಜಾಲ ಉಡುಪಿ
ಹೊಸ ಪ್ರವಾಸಿ ವಾಹನ ಶೋರೂಂನಿಂದ ಮಾರುಕಟ್ಟೆಗೆ ಬರುವಾಗಲೇ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಸಬೇಕು. ಹಳೆಯ ಪ್ರವಾಸಿ ವಾಹಗಳಿಗೆ ಯಾವುದೇ ಕಾರಣಕ್ಕೂ ನಾವು ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಸುವುದಿಲ್ಲ. ಈ ವಿಚಾರವಾಗಿ ಸಾರಿಗೆ ಅಧಿಕಾರಿಗಳು ಕಿರುಕುಳ ಕೊಟ್ಟರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಉಡುಪಿ ಜಿಲ್ಲಾ ಟಾಕ್ಸಿಮನ್ಸ್ ಮತ್ತು ಮಾಕ್ಸಿಕ್ಯಾಬ್ ಅಸೋಸಿಯೇಷನ್ನ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘಪತಿ ಭಟ್ ಎಚ್ಚರಿಕೆ ನೀಡಿದರು.
ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ವಿರೋಧಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ (ರಿ.) ನೇತೃತ್ವದಲ್ಲಿ ಹಾಗೂ ಕರ್ನಾಟಕ ಟ್ಯಾಕ್ಸಿ ಡೆವರ್ಸ್ ಆರ್ಗನೈಸೇಷನ್ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಪ್ರವಾಸಿ ವಾಹನ ಸಂಘಟನೆಗಳ ಚಾಲಕ-ಮಾಲಕರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನವೆಂಬರ್ ತಿಂಗಳ ವರೆಗೆ ಕಾಲಾವಕಾಶ ಇದ್ದರೂ ಸಹ ಜಿಲ್ಲಾ ಸಾರಿಗೆ ಅಧಿಕಾರಿಗಳು ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಿಲು ಒತ್ತಡ ಹಾಕುತ್ತಿದ್ದಾರೆ. ಅದಕ್ಕಾಗಿಯೇ ಎಫ್ಸಿಯನ್ನೂ ಕೊಡುತ್ತಿಲ್ಲ. ಈ ವ್ಯವಸ್ಥೆ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ 7,550 ರೂ. ದರ ನಿಗದಿ ಮಾಡಿದ್ದರೂ ಸಹ ರಾಜ್ಯದಲ್ಲಿ 13ರಿಂದ 15 ಸಾವಿರ ರೂ ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯದ ಅಧಿಕಾರಿಗಳಿಗೆ, ಜಿಲ್ಲೆಯ ಆರ್ಟಿಒಗಳಿಗೆ ಕಮಿಷನ್ ಸಿಗಲಿದೆ. ಹೀಗಾಗಿಯೇ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವಿಷಯದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಹಾಗೂ ಆರ್ಟಿಒ ಎಲ್.ಪಿ. ನಾಯಕ್ ಅವರಿಗೆ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೆಟಿಡಿಒ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಜಿಲ್ಲಾಧ್ಯಕ್ಷ ಅಂಬರೀಶ್, ರಾಜ್ಯ ಕೋಶಾಧಿಕಾರಿ ಗುರುರಾಜ್ ಕುಂದಾಪುರ, ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ನ ಪ್ರ. ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಪ್ರಧಾನ ಕೋಶಾಧಿಕಾರಿ ಪ್ರಕಾಶ್ ಅಡಿಗ, ಉಪಾಧ್ಯಕ್ಷರಾದ ಸತೀಶ್ ನಾಯಕ್, ರಾಘವೇಂದ್ರ ಸೋಮಯಾಜಿ ಹಾಗೂ ರವಿ ಶೆಟ್ಟಿ, ಹರೀಶ್, ಜಯಕರ್ ಕುಂದರ್, ವಿಕ್ರಂ, ಕೃಷ್ಣ ಕೋಟ್ಯಾನ್, ಸತೀಶ್ ಶೆಟ್ಟಿ ಹಾಗೂ ನೂರಾರು ಮಂದಿ ಚಾಲಕ-ಮಾಲಕರು ಪಾಲ್ಗೊಂಡಿದ್ದರು.
ಕಳ್ಳತನದಲ್ಲಿ ಬಾಡಿಗೆ ಹೋಗುವ ವೈಟ್ ಬೋರ್ಡ್ ವಾಹನಗಳನ್ನು ಮೊದಲು ತಡೆದು, ಕಾನೂನು ಕ್ರಮ ಕೈಗೊಳ್ಳಬೇಕು. ಆರ್ಟಿಒ ಅಧಿಕಾರಿಗಳು ಎ್ಸಿ ನವೀಕರಣ ಮಾಡಿಕೊಟ್ಟಿಲ್ಲ ಎಂದು ನಾವುಗಳು ಯಾರೂ ಟ್ಯಾಕ್ಸಿಯನ್ನು ಮನೆಯಲ್ಲಿ ಸುಮ್ಮನೆ ನಿಲ್ಲಿಸುವುದಿಲ್ಲ. ಎಫ್ಸಿ ಕೊಡದಿದ್ದರೂ ಟ್ಯಾಕ್ಸಿ ಚಲಾಯಿಸುತ್ತೇವೆ. ಮುಂದೆ ಯಾವುದೇ ಅವಘಡ ಸಂಭವಿಸಿದರೆ ಅದಕ್ಕೆ ಆರ್ಟಿಒಗಳೇ ಹೊಣೆ. ಉಡುಪಿ ಜಿಲ್ಲೆಯಲ್ಲಿ 2,660 ಟ್ಯಾಕ್ಸಿಗಳಿದ್ದು, ವಿನಾಕಾರಣ ತೊಂದರೆ ನೀಡಿದರೆ ಎಲ್ಲ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ, ಆರ್ಟಿಒ ಕಚೇರಿಗೆ ಮುತ್ತಿಗೆ ಹಾಕಿ ಬೇಗ ಜಡಿಯುತ್ತೇವೆ ಎಂದು ಕೆ.ರಘಪತಿ ಭಟ್ ಎಚ್ಚರಿಕೆ ನೀಡಿದರು.