ಜಿಲ್ಲೆ

ಗೃಹಲಕ್ಷ್ಮಿ ಯೋಜನೆಯಲ್ಲಿ 34,561 ನೋಂದಣಿ: ಡಾ. ರೇಜು

ಉಡುಪಿ: ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 34,561 ನೊಂದಣಿ ಆಗಿದ್ದು, ನೋಂದಣಿ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪ್ರತಿದಿನ ನೊಂದಣಿ ಕೇಂದ್ರಗಳಿಗೆ ನೀಡಿರುವ ಗುರಿಯನ್ನು ತಲುಪಬೇಕು. ಪ್ರಜಾಪ್ರತಿನಿಧಿಗಳು ಸಹ ನೊಂದಣಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ. ರೇಜು ಹೇಳಿದರು.

ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ತಿಂಗಳು ಶಕ್ತಿ ಯೋಜನೆಯಡಿ 29,790 ಮಹಿಳೆಯರು ಪ್ರಯಾಣಿಸಿದ್ದು, 11,11,533 ವೆಚ್ಚವನ್ನು ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 2,33,291 ಗ್ರಾಹಕರ ಅರ್ಜಿ ನೊಂದಾಯಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ನೆರೆಯಿಂದಾಗಿ ಇದುವರೆಗೆ 9 ಮಾನವ ಜೀವಹಾನಿಗಳು ಉಂಟಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಮಳೆ ಅಧಿಕವಾಗಿ ಸುರಿದು ಮತ್ತಷ್ಟು ಅವಘಢಗಳು ಉಂಟಾಗುವ ಸಾಧ್ಯತೆಗಳಿವೆ. ಹೆಚ್ಚಿನ ಹಾನಿಯನ್ನು ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಾನವ ಜೀವಹಾನಿಯಾಗದಂತೆ ಎಚ್ಚರವಹಿಸಬೇಕು ಎಂದರು.

ಈಗಾಗಲೇ ಜಿಲ್ಲೆಗೆ ಪ್ರಕೃತಿ ವಿಕೋಪ ತುರ್ತು ನಿರ್ವಹಣೆಗಾಗಿ ಎಸ್​.ಡಿ.ಅರ್​.ಎಫ್​ ನ 11 ಜನರ ತಂಡವನ್ನು ನಿಯೋಜಿಸಲಾಗಿದೆ. 300 ಕ್ಕೂ ಹೆಚ್ಚು ಸ್ವಯಂ ಸೇವಕರಿಗೆ ಆಪದ ಮಿತ್ರ ಯೋಜನೆಯಡಿ ತರಬೇತಿ ನೀಡಲಾಗಿದ್ದು, ಇಲಾಖೆ ಅಧಿಕಾರಿಗಳು ತೊಂದರೆಯಾದಾಗ ವಿಕೋಪ ಪರಿಹಾರ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಬೇಕು ಎಂದರು.

ಕೊರಗ ಸಮುದಾಯದ 350 ಕ್ಕೂ ಹೆಚ್ಚು ಜನರಿಗೆ ಬಿಪಿಎಲ್​ ಕಾರ್ಡ್​ ದೊರೆತಿಲ್ಲ. ಪ್ರಸ್ತುತ ಹೊಸ ಪಡಿತರ ಚೀಟಿಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಇವರುಗಳಿಗೆ ಆದ್ಯತೆಯ ಮೇಲೆ ನೀಡಲು ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕೆಂದು ಸೂಚನೆ ನೀಡಿದರು.

ಗ್ರಾಮೀಣ ಭಾಗದ ಪ್ರತಿ ಗ್ರಾಮಗಳ ಮನೆಗಳಿಗೂ ಜಲಜೀವನ್​ ಮಿಷನ್​ ಯೋಜನೆಯಡಿ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಬೇಕು. ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. ಮೂರನೇ ಹಂತದ ಕಾಮಗಾರಿ ಕೈಗೊಳ್ಳುವಾಗ ಯಾವುದೇ ಮನೆಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದರು.
ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಅಮೃತ್​ ಯೋಜನೆಯ ಕಾಮಗಾರಿಯನ್ನು ಮುಂದಿನ ವರ್ಷಧ ಸೆಪ್ಟಂಬರ್​ ಒಳಗಾಗಿ ಪೂರ್ಣಗೊಳಿಸಬೇಕು ಎಂದರು.

ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು. ಮರು ಭಿತ್ತನೆಗೆ ಅವಶ್ಯವಿರುವ ಭಿತ್ತನೆ ಬೀಜಗಳನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಬೆಳೆ ವಿಮೆ ವ್ಯಾಪ್ತಿಗೆ ಎಲ್ಲಾ ಬೆಳೆಗಳನ್ನು ತರಲು ಮುಂದಾಗಬೇಕು. ಪ್ರಧಾನಮಂತ್ರಿ ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯೋಜನೆ ಬದ್ಧಗೊಳಿಸುವಿಕೆಯ ಪ್ರಗತಿಯು ನಿಗಧಿತ ಗುರಿಯನ್ನು ಸಾಧಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್​., ಎಸ್ಪಿ ಅಕ್ಷಯ್​ ಎಂ ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್​., ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್​, ಕುದುರೆಮುಖ ವನ್ಯಜಿವಿ ವಿಭಾಗದ ಡಿಎಫ್​ಓ ಗಣಪತಿ ಉಪಸ್ಥಿತರಿದ್ದರು.