ಜಿಲ್ಲೆ

ಅವೈಜ್ಞಾನಿಕ ಶೈಕ್ಷಣಿಕ ಆದೇಶ ಹಿಂಪಡೆಯಿರಿ

ಸರ್ಕಾರಕ್ಕೆ ಮಂಜುನಾಥ​ ಭಟ್​ ಆಗ್ರಹ

ಪ್ರಾಂಶುಪಾಲರು-ಉಪನ್ಯಾಸಕರ ಸಂಘದಿಂದ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಇತ್ತೀಚೆಗೆ ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಕಾಲೇಜುಗಳಿಗೆ ಪೂರಕವಲ್ಲದ ಆದೇಶಗಳು ಬರುತ್ತಿದ್ದು, ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಕಾಲೇಜುಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪುತ್ತಿದೆ. ಕೂಡಲೇ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು ಎಂದು ಉಡುಪಿ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್​ ಆಗ್ರಹಿಸಿದರು.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಹೊರಡಿಸಿರುವ ಮತ್ತು ಹೊರಡಿಸುತ್ತಿರುವ ಅವೈಜ್ಞಾನಿಕ ಆದೇಶ ಖಂಡಿಸಿ ಉಡುಪಿ ಜಿಲ್ಲಾ ಪ್ರಾಂಶುಪಾಲರು, ಉಪನ್ಯಾಸಕರ ಸಂಘದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ (ನ.7) ಸಂಜೆ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದರು.

ವಿವಿಧ 12 ಬೇಡಿಕೆಗಳ ಮನವಿ

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಹಾಗೂ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ 2025ರ ಅ.10ರಂದು ಹಾಗೂ ನ.18ರಂದು ಹೊರಡಿಸಿರುವ ಜಂಟಿ ಸುತ್ತೋಲೆ ಹಿಂಪಡೆಯಬೇಕು. ಪ್ರಸ್ತುತ ವೃಂಧ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಇಪಿ-55 ಎಸ್​ಎಚ್​ಎಚ್​ ಭಾಗ-1 ಮತ್ತು ಭಾಗ-2ರಲ್ಲಿ 9-10ನೇ ತರಗತಿ ಮತ್ತು 11-12ನೇ ತರಗತಿಗಳಿಗೆ ಬೋಧನೆ ಮಾಡುವ ಕಡತವನ್ನು ಶಿಕ್ಷಣ ಸಚಿವರು ಮಾನ್ಯ ಮಾಡದೆ ತಿರಸ್ಕರಿಬೇಕು. 2024-25ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಹಾಗೂ ಸಂಭಾವನೆ ಬಾಕಿ ಇರುವ 13.5 ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ/ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಹುದ್ದೆ ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. ನಿಶ್ಚಿತ ಪಿಂಚಣಿ ಸೇರಿದಂತೆ ಪ್ರಮುಖ 12 ಬೇಡಿಕೆಗಳ ಮನವಿಯನ್ನು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರಾಂಶುಪಾಲರ ಸಂಘದ ಪ್ರಮುಖರಾದ ನಿಕಟಪೂರ್ವ ಅಧ್ಯಕ್ಷ ವರ್ಗೀಸ್​ ಪಿ., ರವೀಂದ್ರ ಉಪಾಧ್ಯ, ಜಗದೀಶಕುಮಾರ್​, ವಿಶ್ವನಾಥ ಕರಬ, ಶ್ರೀಧರ ಶೆಟ್ಟಿ, ಸುಚೇತಾ, ಸುಜಾತಾ, ಸುಶೀಲಾ, ಲೀಲಾಬಾಯಿ ಭಟ್​, ಉಪನ್ಯಾಸಕರ ಸಂಘದ ಪ್ರಮುಖರಾದ ಉದಯಕುಮಾರ್​ ಎಂ.ಪಿ., ಸುಧೀರ್​ ಪ್ರಭು, ಹರೀಶ್​ಕುಮಾರ್​, ವಾಸು ಮೊಗೇರ, ವಿಜಯಕುಮಾರ್​, ಸವಿತಾ ಎರ್ಮಾಳ್​, ರಂಜಿತಾ, ಜಿನ್ಸಿ ಜಾಯ್​, ಚಂದ್ರಕಲಾ ಶೆಟ್ಟಿ ಇತರರಿದ್ದರು.

ಪದವಿ ಪೂರ್ವ ಪರೀಕ್ಷಾ ಮಂಡಳಿಯನ್ನು ಪದವಿ ಪೂರ್ವ ಇಲಾಖೆಯಿಂದ ಪ್ರತ್ಯೇಕಿಸಿದ ನಂತರ ದೇಶದಲ್ಲಿ ಮಾದರಿಯಾಗಿದ್ದ ಪದವಿ ಪೂರ್ವ ಶಿಕ್ಷಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧವೇ ಇಲ್ಲದ ಡಿಐಇಟಿ ನ ಪ್ರಶಿಕ್ಷಣಾರ್ಥಿಗಳನ್ನು ಪದವಿ ಪೂರ್ವ ಕಾಲೇಜುಗಳ ಸ್ಥಿತಿ&ಗತಿಗಳ ದತ್ತಾಂಶ ಕ್ರೋಡಿಕರಿಸುವ ನೆಪದಲ್ಲಿ ಕಾಲೇಜಗಳ ಪರಿಶೀಲನೆ ಕಾರ್ಯ ನಿಜಕ್ಕೂ ದುರಂತವೇ ಸರಿ. | ಮಂಜುನಾಥ ಭಟ್​. ಪ್ರಾಂಶುಪಾಲರ ಸಂಘದ ಅಧ್ಯಕ್ಷ