ಉಡುಪಿ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕೆ ಮಾದರಿ ಯೋಜನೆ
ಭದ್ರತೆ ಹೆಚ್ಚಳಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಕ್ರಮ ಪಾಲನೆ
ಗೋವುಗಳ್ಳರು ಹಾಗೂ ಮನೆಗಳಲ್ಲಿ ಕನ್ನ ಹಾಕುವವರ ವಿರುದ್ಧ ಸಮರ ಸಾರಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ಇದೀಗ ಎಲ್ಲ ಬಗೆಯ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಹೊಸ ಯೋಜನೆ ಜಾರಿಗೊಳಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ದೃಷ್ಟಿ ಕಣ್ಗಾವಲು ನಡೆಸಲಿದೆ. ಅಪರಾಧ ಕೃತ್ಯಗಳಿಗೆ ಮೂಗುದಾರ ಹಾಕಲು ಖಾಕಿ ದೃಷ್ಟಿ ಸಜ್ಜುಗೊಳ್ಳುತ್ತಿದೆ.
ದೃಷ್ಟಿಯ ಕಾರ್ಯಾಚರಣೆ
ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ದೃಷ್ಟಿ ಎರಡು ಪ್ರಮುಖ ಉದ್ದೇಶವನ್ನು ಹೊಂದಿದೆ. ಮೊದಲನೇಯದಾಗಿ ಈವರೆಗೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚು ಘಟಿಸಿದ ಸ್ಥಳ ಅಥವಾ ಊರುಗಳಲ್ಲಿ ಜನರನ್ನು ಒಗ್ಗೂಡಿಸಿ ಒಂದು ಸಂಘಟನೆ ರಚಿಸಲಾಗುತ್ತದೆ. ಆ ಸಂಘಟನೆಯ ಮೂಲಕ ಒಂದಿಷ್ಟು ಮನೆಗಳ ಕಾವಲಿಗಾಗಿ ಭದ್ರತಾ ಸಿಬ್ಬಂದಿ ನೇಮಿಸಲಾಗುತ್ತದೆ. ಅವರು ರಾತ್ರಿ ಗಸ್ತು ಮಾಡುವ ಪೊಲೀಸರೊಂದಿಗೆ ಸಂಪರ್ಕ ಇಟ್ಟುಕೊಂಡು ದಿನವೂ ತಮ್ಮ ಭಾಗದಲ್ಲಿ ಯಾರಾದರೂ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದರೆ ಆ ಕುರಿತು ಮಾಹಿತಿ ನೀಡುವುದು ದೃಷ್ಟಿಯ ಪ್ರಥಮ ಕಾರ್ಯವಾಗಿದೆ.
ಕ್ಯಾಮರಾ ಕಣ್ಗಾವಲು
ಎಷ್ಟೋ ಕಡೆಗಳಲ್ಲಿ ಸಂಭವಿಸಿದ ಮನೆಗಳ್ಳತನ ಅಥವಾ ಇನ್ನಿತರ ಅಪರಾಧ ಪ್ರಕರಣ ಭೇದಿಸುವಲ್ಲಿ ಸಾಕ್ಷ್ಯಗಳ ಕೊರತೆಯಿಂದಾಗಿ ಆರೋಪಿಗಳನ್ನು ಬಂಧಿಸಲು ವಿಳಂಬವಾಗುತ್ತದೆ. ಪ್ರಮುಖವಾಗಿ ಆಯಕಟ್ಟಿನ ಸ್ಥಳಗಳಲ್ಲಿ ತನಿಖೆಗೂ ತೊಡಕಾಗುತ್ತವೆ. ಹೀಗಾಗಿ ಯಾವುದೇ ಭಾಗದಲ್ಲಿ ಅಪರಾಧ ಕೃತ್ಯ ಅಥವಾ ದುರ್ಘಟನೆ ಸಂಭವಿಸಿದಲ್ಲಿ ಅದನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಹಾಯಕವಾಗುವಂತೆ ಸಿಸಿ ಕ್ಯಾಮರಾ ಅಳವಡಿಸುವುದು ದೃಷ್ಟಿಯ ಎರಡನೇ ಕಾರ್ಯವಾಗಿದೆ.
ಎಲ್ಲೆಲ್ಲಿ ಅಳವಡಿಕೆ?
ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ನಗರ, ಶಿರ್ವಾ ಮತ್ತು ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ 2 ಕಡೆ, ಕುಂದಾಪುರ, ಹೆಬ್ರಿ, ಕಾರ್ಕಳ ನಗರ, ಹಿರಿಯಡ್ಕ, ಶಂಕರ ನಾರಾಯಣ ಮತ್ತು ಬ್ರಹ್ಮಾವರ ಠಾಣಾ ಸರಹದ್ದಿನಲ್ಲಿ ತಲಾ 1 ಸೇರಿ ಒಟ್ಟು 12 ಕಡೆಗಳಲ್ಲಿ ದೃಷ್ಟಿ ಯೋಜನೆ ಆರಂಭಿಸಲಾಗಿದೆ. ಜಿಲ್ಲೆಯ ಉಳಿದ ಭಾಗಗಳಲ್ಲಿ ಇನ್ನೂ 21 ಕಡೆಗಳಲ್ಲಿ ಆರಂಭಿಸಲಾಗುವುದು.
ಕಳೆದ ಮೂರ್ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ಮನೆಗಳಿಗೆ ಕನ್ನ ಪ್ರಕರಣ ಹೆಚ್ಚುತ್ತಿದ್ದು, ಚಾಲಾಕಿ ಕಳ್ಳರು ತಪ್ಪಿಸಿಕೊಳ್ಳುತ್ತಿದ್ದಾರೆ. ಇದೀಗ ಸಾರ್ವಜನಿಕ ಭದ್ರತೆ ಹಾಗೂ ಕಳ್ಳರ ಕಡಿವಾಣಕ್ಕೆ ದೃಷ್ಟಿ ಕಣ್ಗಾವಲು ನಡೆಸಲಿದೆ.
207 ಜಂಕ್ಷನ್ಗಳಲ್ಲಿ 601 ಸಿಸಿ ಕ್ಯಾಮರಾ
ಉಡುಪಿಯ ಛೇಂರ್ಬಸ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಜಿಲ್ಲೆಯ 207 ಜಂಕ್ಷನ್ಗಳಲ್ಲಿ 601 ಸಿಸಿ ಕ್ಯಾಮರಾ ಅಳವಡಿಸಲು ಜಿಲ್ಲಾ ಪೊಲೀಸ್ ಇಲಾಖೆ ಯೋಜಿಸಿದೆ. ಇದಕ್ಕಾಗಿ ಅಂದಾಜು 2.5 ಕೋಟಿ ರೂ. ವೆಚ್ಚವಾಗಲಿದ್ದು, ಒಂದಿಷ್ಟು ಉದ್ಯಮಿ ಹಾಗೂ ದಾನಿಗಳ ಸಹಕಾರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಈ ಕ್ಯಾಮರಾಗಳನ್ನು 5 ವರ್ಷಗಳ ಕಾಲ ನಿರ್ವಹಣೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದಲ್ಲದೆ, 9 ಕಡೆಗಳಲ್ಲಿ ಅಂತರ್ಜಿಲ್ಲಾ ಗಡಿ ರಸ್ತೆಯನ್ನೂ ಗುರುತಿಸಲಾಗಿದ್ದು ಇಲ್ಲಿಯೂ ವಾಹನಗಳ ಚಲನವಲನಗಳ ಮೇಲೆ ನಿಗಾ ಇಡಲು ಆಟೋಮೆಟಿಕ್ ನಂಬರ್ ಪ್ಲೇಟ್ ರೀಡರ್ ಕ್ಯಾಮರಾ ಅಳವಡಿಸಲಾಗುತ್ತಿದೆ. ಶಿರೂರು ಹಾಗೂ ಹೆಜಮಾಡಿ ಬಿಟ್ಟು ಒಟ್ಟು 10 ಕಡೆಗಳಲ್ಲಿ ಈ ವಿಶಿಷ್ಟ ಕ್ಯಾಮರಾ ಕಾರ್ಯಾಚರಣೆ ಮಾಡಲಿದೆ. ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹಾಗೂ ಎಸ್ಪಿ ಕಚೇರಿಗೆ ಎಲ್ಲ ಕ್ಯಾಮರಾಗಳಿಂದ 24×7 ವಿಡಿಯೋ (ದೃಶ್ಯ)ಗಳು ರವಾನೆಯಾಗುವ ವ್ಯವಸ್ಥೆ ಮಾಡಲಾಗಿದೆ. ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ 'ದೃಷ್ಟಿ' ಸಿಸಿ ಕ್ಯಾಮರಾ ಅಳವಡಿಸಿದ್ದು, ಉಡುಪಿಯ ಕಲ್ಸಂಕ ಜಂಕ್ಷನ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದೃಷ್ಟಿ ಎಂಬ ವಿನೂತನ ಕ್ರಮ ಅಳವಡಿಸುತ್ತಿದ್ದೇವೆ. ರಾಜ್ಯ ಗೃಹ ಇಲಾಖೆಯಿಂದ ಮನೆ ಮನೆಗೆ ಪೊಲೀಸ್ ಎಂಬ ಅಭಿಯಾನವೂ ಆರಂಭಗೊಂಡಿದ್ದು ಅದರೊಟ್ಟಿಗೇ ಪೂರಕವಾಗಿ ದೃಷ್ಟಿ ಕಾರ್ಯ ನಿರ್ವಹಿಸಲಿದೆ. ಅಪರಾಧ ಪ್ರಕರಣ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯೊಟ್ಟಿಗೆ ಸಾರ್ವಜನಿಕರು ಹಾಗೂ ಖಾಸಗಿಯವರೂ ಕೈ ಜೋಡಿಸಿದ್ದರಿಂದ ದೃಷ್ಟಿ ಎಂದು ಹೆಸರಿಡಲಾಗಿದೆ.
| ಹರಿರಾಂ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ