ಪ್ರಶಾಂತ ಭಾಗ್ವತ, ಉಡುಪಿ
ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪ್ ಆಗಿದ್ದ ಉಡುಪಿ ಜಿಲ್ಲೆ ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತವಾಗಿದೆ. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆ ಶೇ.91 ಫಲಿತಾಂಶದ ಮೂಲಕ ಪ್ರಥಮ ಸ್ಥಾನ ಗಳಿಸಿದ್ದು, ಶೇ.89.96 ಫಲಿತಾಂಶದ ಮೂಲಕ ಉಡುಪಿ ನಂತರದ ಸ್ಥಾನ ಗಳಿಸಿದೆ.
ಈ ಬಾರಿಯೂ ಸಹ ಪ್ರಥಮ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಉಡುಪಿ ಜಿಲ್ಲೆ, ಕೇವಲ ಶೇ.1.4 ಫಲಿತಾಂಶ ಹಿಂದೆ ಬೀಳುವ ಮೂಲಕ ಅಗ್ರಸ್ಥಾನದಿಂದ ವಂಚಿತವಾಗಿದೆ. ಆದರೂ ಜಿಲ್ಲೆಯ ಎಸ್ಎಸ್ಎಲ್ಸಿ ಮಕ್ಕಳ ಸಾಧನೆ ಸಂತಸ ತಂದಿದೆ.
2023ರಲ್ಲಿ 17ನೇ ಸ್ಥಾನಕ್ಕೆ ಕುಸಿದು ಕಳಪೆ ಫಲಿತಾಂಶ ಬಂದಿದ್ದನ್ನು ಸವಾಲಾಗಿ ಸ್ವೀಕರಿಸಿದ್ದ ಜಿಲ್ಲಾ ಶಿಕ್ಷಣ ಇಲಾಖೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ, ಶಿಕ್ಷಕರ ಕಾರ್ಯಾಗಾರ, ಕಲ್ಪಿತ ಪರೀಕ್ಷೆ, ಡಿಡಿಪಿಐ ಹಾಗೂ ಶಿಕ್ಷಕರ ಸಹಿತವಾಗಿ ಪ್ರತಿದಿನವೂ ಮನೆ ಹಾಗೂ ಶಾಲೆಯಲ್ಲಿ ಮಕ್ಕಳ ಓದಿನ ಬಗ್ಗೆ ಗಮನ, ತಿಂಗಳಿಗೊಂದು ಪಾಲಕರ ಸಭೆ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಎಲ್ಲ ರೀತಿಯ ಪ್ರಯತ್ನ, ಶ್ರಮ ಹಾಕಿತ್ತು. ತನ್ಮೂಲಕ ಕಳೆದ ವರ್ಷ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿತ್ತು.
ಈ ಬಾರಿ ಒಟ್ಟು 13,579 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 12,215 ಮಕ್ಕಳು ಉತ್ತೀರ್ಣರಾಗಿದ್ದು, 1,364 ಮಂದಿ ಅನುತ್ತೀರ್ಣ (ಗೈರು ಸೇರಿ) ಆಗಿದ್ದಾರೆ. ಕಳೆದ ವರ್ಷ 14,018 ಮಕ್ಕಳಲ್ಲಿ 13,246 ಮಂದಿ ತೇರ್ಗಡೆಯಾಗಿದ್ದರು. ಇದರಲ್ಲಿ ಗೈರು ಹಾಜರಾತಿ ಸೇರಿ ಒಟ್ಟು 1,042 ವಿದ್ಯಾರ್ಥಿಗಳು ಫೇಲ್ ಆಗಿದ್ದರು.
ಕಳೆದ ಬಾರಿ ಗ್ರೇಸ್ ಮಾರ್ಕ್ಸ್ ಹಾಗೂ ಹೆಚ್ಚು ವಿದ್ಯಾರ್ಥಿಗಳು ಇದ್ದುದರಿಂದ ಫಲಿತಾಂಶ ಏರಿಕೆಯಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆ ಇರುವುದರಿಂದ ಫಲಿತಾಂಶದಲ್ಲಿಯೂ ತುಸು ಇಳಿಕೆ ಕಂಡಿದೆ. ಆದರೆ, ರಾಜ್ಯದ ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಶೇ.66.16 ಇದ್ದು, ಉಡುಪಿ ಜಿಲ್ಲೆ ರಾಜ್ಯದ ಫಲಿತಾಂಶಕ್ಕಿಂತ ಶೇ.23.77ರಷ್ಟು ಹೆಚ್ಚು ಫಲಿತಾಂಶ ದಾಖಲಿಸಿದೆ.
ವರ್ಷ ಫಲಿತಾಂಶ ಸ್ಥಾನ 2014-15 93.37 1 2015-16 89.64 2 2016-17 84.23 1 2017-18 88.30 1 2018-19 89.49 5 2019-20 86.48 9 2020-21 100 (ಕರೊನಾ ಸಂದರ್ಭ) 2021-22 89.46 13 2022-23 91.00 17 2023-24 94.00 1
| ಕೆ.ಶ್ರೀನಿತ್ ಎಸ್. ಶೇರಿಗಾರ. ತೃತೀಯ ಸ್ಥಾನ. ಶ್ರೀ ಅನಂತೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್, ಉಡುಪಿನಾನು 8ನೇ ತರಗತಿ ಇರುವಾಗ ನನ್ನ ತಂದೆಯನ್ನು ಕಳೆದುಕೊಂಡೆ. ಚೆನ್ನಾಗಿ ಓದಿ ಸಾಧನೆ ಮಾಡಬೇಕೆಂದು ಸದಾ ಅವರು ಹೇಳುತ್ತಿದ್ದರು. ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಸ್ಥಾನ ಬರಲು ಸರ್ವಪ್ರಯತ್ನ ಮಾಡಿದ್ದೆ. ನಿತ್ಯವೂ ಹೆಚ್ಚಿನ ಸಮಯ ಓದಿಗೆ ಮೀಸಲಿಟ್ಟಿದ್ದೆ. ಪರೀಕ್ಷೆಯ ಅಂತಿಮ ದಿನದಲ್ಲಿ ಕೇವಲ ಮೂರ್ನಾಲ್ಕು ತಾಸು ಮಾತ್ರ ನಿದ್ರೆ ಮಾಡುತ್ತಿದ್ದೆ. 623 ಅಂಕದೊಂದಿಗೆ ತೃತೀಯ ಸ್ಥಾನ ಬಂದಿದೆ. ಮುಂದೆ ಇನ್ನೂ ಚೆನ್ನಾಗಿ ಓದಿ ಇಂಜಿನಿಯರ್ ಆಗಬೇಕೆಂಬ ಕನಸಿದೆ. ಕೆಲ ಸಮಸ್ಯೆಗಳ ನಡುವೆ ಈ ವರ್ಷವೂ ಸಹ ಪ್ರಥಮ ಸ್ಥಾನ ಗಳಿಕೆಗೆ ಅಪಾರ ಶ್ರಮ ವಹಿಸಿದ್ದೆವು. ವಿದ್ಯಾರ್ಥಿಗಳಿಗೆ ಎಲ್ಲ ಅವಕಾಶ, ಸೌಲಭ್ಯ ಕೊಡುವ ನಿಟ್ಟಿನಲ್ಲಿ ಶಿಕ್ಷಕರಿಂದ ವರ್ಷಪೂರ್ತಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಮಕ್ಕಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಮಕ್ಕಳು-ಶಿಕ್ಷಕರ ಶ್ರಮಕ್ಕೆ ತಕ್ಕ ಫಲ ಲಭಿಸಿದೆ. ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. | ಗಣಪತಿ ಕೆ. ಡಿಡಿಪಿಐ ಉಡುಪಿ