ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಉಡುಪಿಯಲ್ಲಿ ಜಿಲ್ಲಾ ಮಟ್ಟದ ಸ್ವರ್ಧೆ ಉದ್ಘಾಟನೆ
ಶ್ರೀಕೃಷ್ಣ ಯೋಗೀಶ್ವರನಾಗಿದ್ದರಿಂದ ಆತನಿಗೆ ಯೋಗಿಗಳೆಂದರೆ ಬಲುಪ್ರೀತಿ. ಈ ಬಾರಿ ಜನ್ಮಾಷ್ಟಮಿಯನ್ನು ಬಹುಮುಖಿಯಾಗಿ ಆಚರಿಸಬೇಕೆಂಬ ಸದುದ್ದೇಶದಿಂದ ಮಂಡಲೋತ್ಸವ ಆರಂಭಗೊಂಡಿದೆ. ಅದರಲ್ಲಿ ಯೋಗಾಸನ ಸ್ಪರ್ಧೆಯೂ ಪ್ರಮುಖವಾಗಿದೆ. ರೋಗಗಳ ನಿವಾರಣೆಗೆ ಕಾರಣವಾಗುವ ಯೋಗಾಸನವನ್ನು ಮಕ್ಕಳಿಗೆ ಕಲಿಸಿಕೊಡಬೇಕಿದೆ. ಬಾಲ್ಯದಲ್ಲಿಯೇ ಯೋಗಾಭ್ಯಾಸ ಮೈಗೂಡಿಸಿದರೆ ನಿರೋಗಿಗಳಾಗಿ ಇರಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ (ರಿ.) ಬೆಂಗಳೂರು ಸಹಕಾರದಲ್ಲಿ ಆಗಸ್ಟ್ 3ರಂದು ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ವರ್ಧೆ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಿಂದ ಕ್ರೀಡೆಯೆಂದು ಘೋಷಣೆ
ಪತಂಜಲಿ ಯೋಗಪೀಠ ಹರಿದ್ವಾರದ ವರಿಷ್ಠ ಹಾಗೂ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರಲಾಲ್ ಆರ್ಯ ಮಾತನಾಡಿ, ಯೋಗಾಸನವು ಭಾರತ ದೇಶದ ಪ್ರಾಚೀನ ಪರಂಪರೆಯಾಗಿದೆ. ಅದನ್ನು ಸಾಧನೆಯಾಗಿ ಅಭ್ಯಾಸ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ಕ್ರೀಡೆ ಎಂದು ಘೋಷಿಸಿದ್ದಾರೆ. ಇತರ ಕ್ರೀಡೆಯಂತೆ ಯೋಗಾಸನವೂ ಈಗ ಕ್ರೀಡೆಯಾಗಿದೆ. ತನ್ನಿಮಿತ್ತ ಇಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ಇಲ್ಲಿ ಗೆದ್ದವರು ರಾಜ್ಯ, ದೇಶ ಮಟ್ಟದಲ್ಲಿ ಹಾಗೂ ಒಲಿಂಪಿಕ್ನಲ್ಲೂ ಪಾಲ್ಗೊಳ್ಳಲು ಅವಕಾಶ ಲಭಿಸಲಿದೆ ಎಂದರು.
ಯೋಗದಿಂದ ಸಂಸ್ಕಾರ
ಕೆವೈಎಸ್ಎ ಉಡುಪಿ ಜಿಲ್ಲಾ ಅಧ್ಯಕ್ಷ ನಿತ್ಯಾನಂದ ಪೈ ಮಾತನಾಡಿ, ಸ್ಪರ್ಧೆ ನಿಮಿತ್ತ ಮಾತ್ರ. ಯೋಗ ಮಾಡುತ್ತಿದ್ದರೆ ಅದರಲ್ಲೂ ಅಷ್ಟಾಂಗ ಯೋಗದ ಬಗ್ಗೆ ತಿಳಿದರೆ ಸಂಪೂರ್ಣ ಫಲ ಲಭಿಸುತ್ತದೆ. ಯೋಗ ಕಲಿತರೆ ಎಲ್ಲ ರೀತಿಯ ಸಂಸ್ಕಾರ, ಸಂಸ್ಕೃತಿ, ಆರೋಗ್ಯ ಲಭಿಸಲು ಸಾಧ್ಯ ಎಂದರು.
ಕೆವೈಎಸ್ಎ ಜತೆ ಕಾರ್ಯದರ್ಶಿ ಕೆ.ನರೇಂದ್ರ ಕಾಮತ, ಕಾರ್ಯದರ್ಶಿ ಕೆ.ಅಶೋಕಕುಮಾರ್, ಜಿಲ್ಲಾ ಕೃಷಿಕ ಸಂದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಭಾರತ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ವೆಂಕಟೇಶ ಮೆಹಂದಳೆ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ವೇದಾವತಿ ಮತ್ತು ತಂಡದವರು ಪ್ರಾರ್ಥಿಸಿದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ ಸ್ವಾಗತಿಸಿದರು. ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ರಂಜಿತ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಯೋಗ ಶಿಕ್ಷಕ ಲಕ್ಷ್ಮಣ ಕಾಮತ ವಂದಿಸಿದರು.
ನೂರಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಯೋಗ ಸ್ಪರ್ಧೆ ನಡೆಯಿತು. 10ರಿಂದ 14, 15ರಿಂದ 18, 19ರಿಂದ28, 29ರಿಂದ 35, 36ರಿಂದ45, 46ರಿಂದ 55 ವರ್ಷದೊಳಗಿನವರಿಗೆ ಪ್ರತ್ಯೇಕವಾಗಿ ಸ್ವರ್ಧೆ ನಡೆಯಿತು. ಸಾಂಪ್ರದಾಯಿಕ ಯೋಗಾಸನ, ಮುಂದೆ, ಹಿಂದೆ, ಬಾಗಿ ತಿರುಗಿ, ಕಾಲಿನ ಮೇಲೆ, ಕೈ ಮೇಲೆ, ಬೆನ್ನಿನ ಮೇಲೆ, ಕಲಾತ್ಮಕ ವೈಯಕ್ತಿಕ, ಕಲಾತ್ಮಕ ಜೋಡಿ, ಲಯಬದ್ಧ ಜೋಡಿ, ರಿದಮಿಕ್ ಯೋಗಾಸನ ಸ್ವರ್ಧೆಯಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.