ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ರಾಜ್ಯ ಸಹಕಾರ ಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರಿಗಳ ಸಹಕಾರದಲ್ಲಿ ನ.14ರಿಂದ ನ.20ರ ವರೆಗೆ ಉಡುಪಿ ಜಿಲ್ಲಾದ್ಯಂತ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆರಂಭಗೊಳ್ಳಲಿದೆ. ನ.16ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಗುರುವಾರ (ನ.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಈ ಬಾರಿ ಆತ್ಮ ನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎಂಬ ಧ್ಯೇಯದಲ್ಲಿ ಸಪ್ತಾಹ ನಡೆಯಲಿದೆ ಎಂದರು.
ಸಪ್ತಾಹದಲ್ಲಿ ಏಳು ಸಹಕಾರಿ ಸಂಸ್ಥೆಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಂದಾರ್ತಿಯ ವ್ಯವಸಾಯ ಸೇವಾ ಸಹಕಾರ ಸಂದ ಆಶ್ರಯದಲ್ಲಿ ಶ್ರೀ ಚಾಮುಂಡೇಶ್ವರಿ ಸಭಾಂಗಣದ ದುರ್ಗಾ ಸಹಕಾರ ಸೌಧದಲ್ಲಿ ನ.14ರಂದು ಬೆಳಗ್ಗೆ 10:30ಕ್ಕೆ ಸಹಕಾರ ಸಪ್ತಾಹ ಉದ್ಘಾಟಿಸಲಾಗುವುದು. ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಹೆಚ್ಚಿಸಲು ಡಿಜಿಟಲೀಕರಣ ಪ್ರೋತ್ಸಾಹಿಸುವುದು ಎಂಬ ವಿಷಯ ಕುರಿತು ಚರ್ಚೆ ನಡೆಯಲಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ. ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಸಹಕಾರಿ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ ಎಂದರು.
ನ.15ರಂದು ಮಧ್ಯಾಹ್ನ 3 ಗಂಟೆಗೆ ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಂಗಣ. ನ.16ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ, ನ.17ರಂದು ಬೆಳಗ್ಗೆ 10 ಗಂಟೆಗೆ ಪಡುಬಿದ್ರೆಯ ವೈ. ಲಕ್ಷ್ಮಣ ಸಭಾಂಗಣ, ನ.18ರಂದು ಮಧ್ಯಾಹ್ನ 3 ಗಂಟೆಗೆ ಅಲೆವೂರಿನ ಸಮೃದ್ಧಿ ಸಹಕಾರ ಸೌಧ, ನ.19ರಂದು ಬೆಳಗ್ಗೆ 10:30ಕ್ಕೆ ಹೆಬ್ರಿಯಲ್ಲಿ ಹೆಬ್ರಿ ಬಂಟರ ಸಂಘದ ಸಭಾಭವನ, ನ.20ರಂದು ನಾಗೂರಿನಲ್ಲಿ ಒಡೆಯರ ಮಠದ ಶ್ರೀ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ಸಪ್ತಾಹ ನಡೆಯಲಿದೆ. ಪ್ರತಿ ಕಾರ್ಯಕ್ರಮದಲ್ಲೂ ಸಹ ಕೇಂದ್ರ ಸರ್ಕಾರ ಸೂಚಿತ ವಿಷಯಗಳ ಕುರಿತು ಚರ್ಚೆ, ವಿಚಾರ ಮಂಡನೆ ನಡೆಯಲಿದೆ ಎಂದು ಜಯಕರ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ, ವೈ. ಸುಧೀರಕುಮಾರ್, ಸಿಇಒ ಅನೂಷಾ ಕೋಟ್ಯಾನ್, ಯೂನಿಯನ್ನ ಸಿಬ್ಬಂದಿ ವಿಶ್ವಾನಾಥ್ ಉಪಸ್ಥಿತರಿದ್ದರು.
ಸಪ್ತಾಹದ ಅವಧಿಯಲ್ಲಿ ಪ್ರತಿ ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ಏಳು ಬಣ್ಣಗಳಿರುವ ಸಹಕಾರಿ ಧ್ವಜ ಹಾರಿಸಲಾಗುವುದು. ಅಲ್ಲದೆ, ಸಹಕಾರ ವಿಚಾರಗಳನ್ನು ಜನರಿಗೆ ತಲುಪಿಸಲು 7 ದಿನಗಳ ಕಾಲ ಸಹಕಾರ ಪ್ರಚಾರ ರಥ ಜಿಲ್ಲಾದ್ಯಂತ ಸಂಚರಿಸಲಿದೆ. ಸಹಕಾರಿ ಕ್ಷೇತ್ರದಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವುದು ಸಹಕಾರಿ ಸಪ್ತಾಹದ ಮೂಲಧ್ಯೇಯವಾಗಿದೆ. | ಬಿ.ಜಯಕರ್ ಶೆಟ್ಟಿ ಇಂದ್ರಾಳಿ. ಜಿಲ್ಲಾ ಯೂನಿಯನ್ ಅಧ್ಯಕ್ಷ