ಜಿಲ್ಲೆ

ಏ.30ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕಸಾಪ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ ಮಾಹಿತಿ

ಸುಗುಣೇಂದ್ರ ಶ್ರೀಗಳಿಂದ ಉದ್ಘಾಟನೆ

* ರಾಜಾಂಗಣದಲ್ಲಿ ಕನ್ನಡ ಕಲರವ * ಡಾ. ಪಾದೇಕಲ್ಲು ವಿಷ್ಣು ಭಟ್​ ಸರ್ವಾಧ್ಯಕ್ಷತೆ * ವಿವಿಧ ಚರ್ಚೆ, ಕವಿ-ವಿಚಾರ ಗೋಷ್ಠಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏ.30 ಮತ್ತು ಮೇ 1ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ 17ನೇ ಸಾಹಿತ್ಯ ಸಮ್ಮೇಳನ ಸುಕೃತಿ-2025 ಆಯೋಜಿಸಲಾಗಿದ್ದು, ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು ಭಟ್​ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಏ.28ರಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ

ಸುರೇಂದ್ರ ಅಡಿಗ

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಸಕ ಯಶ್​ಪಾಲ್​ ಸುವರ್ಣ ಅವರು ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಬಾಬು ಪೂಜಾರಿ ಮಾತನಾಡಲಿದ್ದಾರೆ. ಪರಿಷತ್​ನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಡಾ. ಪಾದೇಕಲ್ಲು ಅವರ ಗ್ರಂಥಾವಲೋಕನ, ಡಾ. ಮಂಜುನಾಥ ಕರಬರ ಅವರು ಕೆಂಪುಚುಕ್ಕಿ ಭಾವರೆಕ್ಕೆ, ಪೂರ್ಣೇಶ ಶಿವಪುರ ಅವರು ಪೂರ್ಣಕುಂಭ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಳಿಕ ವಿವಿಧ ವಿಷಯ ಕುರಿತು ಗೋಷ್ಠಿ ನಡೆಯಲಿದೆ ಎಂದರು.

ವಿವಿಧ ಸಾಧಕರಿಗೆ ಸನ್ಮಾನ

ಮೇ 1ರಂದು 10ರಿಂದ ಕವಿಗೋಷ್ಠಿ, ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಂಗಳೂರು ವಿವಿ ಕುಲಪತಿ ಡಾ. ಪಿ.ಎಲ್​. ಧರ್ಮ ಅವರೊಂದಿಗೆ, ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ವಿದ್ಯಾರ್ಥಿಗಳ ಮಾತುಕತೆ ನಡೆಯಲಿದೆ. ಬಳಿಕ ಬಹಿರಂಗ ಅಧಿವೇಶನ ನಡೆಯುವುದು. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಗಣನಾಥ ಎಕ್ಕಾರು ಸಮಾರೋಪ ನುಡಿಗಳನ್ನಾಡುವರು. ಶಾಸಕರು, ಸಂಸದರು, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತಿದೆ. ಜಿಲ್ಲೆಯ ಕನ್ನಡಾಭಿಮಾನಿಗಳೆಲ್ಲ ಸಮ್ಮೇಳನಕ್ಕೆ ಆಗಮಿಸಬೇಕು ಎಂದು ಅಡಿಗ ಅವರು ಆಮಂತ್ರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕಾರ್ಯದರ್ಶಿ ನರೇಂದ್ರಕುಮಾರ್​ ಕೋಟ, ಜಿಲ್ಲಾ ಮಾಧ್ಯಮ ಪ್ರತಿನಿಧಿ ನರಸಿಂಹ ಮೂರ್ತಿ ಮಣಿಪಾಲ, ಬ್ರಹ್ಮಾವರದ ಅಧ್ಯಕ್ಷ ರಾಮಚಂದ್ರ ಐತಾಳ, ಬ್ರಹ್ಮಾವರ ವಲಯ ಅಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ, ಧರ್ಮಸ್ಥಳ ಯೋಜನೆಯ ಅಧಿಕಾರಿ ಸುರೇಂದ್ರ ನಾಯಕ ಇದ್ದರು.

ಭಾಷಾ ಸೌಹಾರ್ದ ವಿಚಾರಗೋಷ್ಠಿ

ಏ.30ರಂದು ಬೆಳಗ್ಗೆ 11:30ಕ್ಕೆ ಭಾಷಾ ಸೌಹಾರ್ದ ವಿಚಾರವಾಗಿ ಮೊದಲ ಗೋಷ್ಠಿ ನಡೆಯಲಿದ್ದು, ಮಾಜಿ ಸಿಎಂ ವೀರಪ್ಪ ಮೊಯಿಲಿ ಹಾಗೂ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ವಿಚಾರ ಮಂಡಿಸಲಿದ್ದಾರೆ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪ್ರತಿಸ್ಪಂದನೆ, ನರೇಂದ್ರಕುಮಾರ್​ ಕೋಟ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.