ಜಿಲ್ಲೆ

ಕನ್ನಡ ನಾಡು-ನುಡಿಗೆ ಶ್ರೀಕೃಷ್ಣ ಮಠದಿಂದ ಪ್ರೋತ್ಸಾಹ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕೃಷ್ಣ ಮಠವು ಆರೇಳು ಶತಮಾನಗಳ ಹಿಂದಿನಿಂದ ಇಂದಿನವರೆಗೂ ಕನ್ನಡ ನಾಡು-ನುಡಿಗೆ ಪ್ರೋತ್ಸಾಹಿಸುತ್ತ ಬಂದಿದೆ. ಪುರಂದರದಾಸ ಮತ್ತು ಕನಕದಾಸರ ಕೀರ್ತನೆಗಳಿಗೆ ಪ್ರೇರಣೆಯಾಗುವ ಮೂಲಕ ಇಂದಿಗೂ ಕನ್ನಡ ಸಾಹಿತ್ಯಕ್ಕೆ ಹಲವು ಧಾರ್ಮಿಕ, ಸಾಂಸ್ಕೃತಿಕ ಕೊಡುಗೆಗಳನ್ನು ನೀಡುತ್ತಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಏ.30 ಮತ್ತು ಮೇ 1ರಂದು ನಡೆಯಲಿರುವ ಉಡುಪಿ ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗೀತಾಮಂದಿರದಲ್ಲಿ ಏ.25ರಂದು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ರಾಜ್ಯಕ್ಕೆ ಮಾದರಿ

ದಕ್ಷಿಣ ಕನ್ನಡ ಜಿಲ್ಲೆಯ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕಲ್ಕೂರ ಮಾತನಾಡಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕೋಟ, ಕೋಶಾಧ್ಯಕ್ಷರಾದ ಪಿ.ಮನೋಹರ ಭಟ್​, ಭುವನಪ್ರಸಾದ ಹೆಗ್ಡೆ, ಸಂಘಟನಾ ಕಾರ್ಯದರ್ಶಿಗಳಾದ ಪಿ.ವಿ. ಆನಂದ ಸಾಲಿಗ್ರಾಮ, ಸತೀಶ ವಡ್ಡರ್ಸೆ, ಸಹ ಕಾರ್ಯದರ್ಶಿ ಡಾ. ರಘು ನಾಯ್ಕ, ತಾಲೂಕು ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ರಾಮಚಂದ್ರ ಐತಾಳ, ಶ್ರೀನಿವಾಸ ಭಂಡಾರಿ, ಪದಾಧಿಕಾರಿಗಳಾದ ಜ್ಯೋತಿ ಪೂಜಾರಿ, ಅಚ್ಯುತ ಪೂಜಾರಿ, ಮಾಧ್ಯಮ ವಕ್ತಾರ ನರಸಿಂಹ ಮೂರ್ತಿ ರಾವ್​, ಮಂಜುನಾಥ ಕುಲಾಲ್​, ಡಾ.ಪ್ರವೀಣಕುಮಾರ್​ ಇತರರಿದ್ದರು.

ಪುತ್ತಿಗೆ ಮಠವೂ ಸಹ ಸಾಹಿತ್ಯದ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಾಹಿತ್ಯ ಮತ್ತು ಸಂಸ್ಕೃತಿ ಎತ್ತಿ ಹಿಡಿಯುವ ಮಠದ ಸುಗುಣಮಾಲಾ ಪ್ರತಿಕೆಯು ರಾಜ್ಯಾದ್ಯಂತ ಜನಪ್ರಿಯವಾಗಿರುವುದು ಪತ್ರಿಕಾಲೋಕಕ್ಕೂ ಹೆಮ್ಮೆಯ ಸಂಗತಿ. ಶ್ರೀ ಮಠವು ಕನ್ನಡ ಸಾಹಿತ್ಯ ಪರಿಷತ್​ನ ನಾಡು-ನುಡಿ, ಸಂಸ್ಕೃತಿಯ ಕುರಿತಾದ ಎಲ್ಲ ಕೆಲಸಗಳಿಗೂ ಕೈಜೋಡಿಸುತ್ತದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ