ಜಿಲ್ಲೆ

ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ 'ಉಗ್ರ' ಕಟ್ಟೆಚ್ಚರ...

ಸಮುದ್ರದಲ್ಲಿ ಕಾವಲು ಪಡೆಯಿಂದ ಗಸ್ತು

ಬೀಚ್​ ಪಾಯಿಂಟ್​ಗಳಲ್ಲಿ ಭದ್ರತೆ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಮ್ಮು-ಕಾಶ್ಮೀರದ ಅನಂತನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ಕುಕೃತ್ಯದ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲಿ ವಿವಿಧ ಪೊಲೀಸ್​ ಪಡೆಗಳು ಭದ್ರತೆ ಹೆಚ್ಚಿಸಿವೆ.

ಇಂಡಿಯನ್​ ಕೋಸ್ಟ್​ ಗಾರ್ಡ್​ ಹಾಗೂ ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪಡೆ ಜಂಟಿಯಾಗಿ ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದು, ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.

ನಿರಂತರ ಗಸ್ತು

ರಾಜ್ಯದ ಕರಾವಳಿಯ ಮೂಲಕ ಭಯೋತ್ಪಾದಕ ಚಟುವಟಿಕೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆ ನಿರಂತರ ಗಸ್ತು ನಡೆಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆಯ 9 ಠಾಣೆಗಳಿದ್ದು, 13 ಬೋಟ್​ ಮೂಲಕ ಪೆಟ್ರೋಲಿಂಗ್​ ನಡೆಸಲಾಗುತ್ತಿದೆ.

ಮೀನುಗಾರರಿಗೂ ಸೂಚನೆ

ಭದ್ರತೆಯ ದೃಷ್ಟಿಯಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೂ ಸಹ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಕಡಲಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯಾವುದಾದರೂ ಬೋಟ್​ ಸಂಚರಿಸಿದರೆ, ಅನುಮಾನಾಸ್ಪದ ವಿದೇಶಿ ವ್ಯಕ್ತಿಗಳು ಕಂಡುಬಂದರೆ ತಕ್ಷಣ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ತಪಾಸಣೆ

ಗುಪ್ತಚರ ಇಲಾಖೆಯ ಮೂಲಕ ಈಗಾಗಲೇ ವಿವಿಧ ರೀತಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಶ್ವಾನದಳದಿಂದ ಮಲ್ಪೆ ಬೀಚ್​, ಬಂದರು ಪ್ರದೇಶ, ಶ್ರೀಕೃಷ್ಣ ಮಠ, ರೈಲು ನಿಲ್ದಾಣ ಸಹಿತ ವಿವಿಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸಾಗರ ರಕ್ಷಕ ದಳ (ಎಸ್​ಆರ್​ಡಿ)ದವರು ಗ್ರಾಮೀಣ ಭಾಗದಲ್ಲಿ ತಂಗುವ ಮೂಲಕ ಜನರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದಾರೆ. ಈವರೆಗೂ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಪತ್ತೆಯಾಗಿಲ್ಲ.

ಉಡುಪಿ ಜಿಲ್ಲೆಯಲ್ಲಿಲ್ಲ ಪಾಕಿಸ್ತಾನದ ಪ್ರಜೆಗಳು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಪಾಕಿಸ್ತಾನದ ಪ್ರಜೆಗಳು ಭಾರತದಲ್ಲಿ ಇದ್ದಾರೆಯೇ ಎಂದು ಪತ್ತೆ ಮಾಡುವ ಕಾರ್ಯ ನಡೆದಿದ್ದು, ಉಡುಪಿ ಜಿಲ್ಲೆಯಲ್ಲೂ ಪೊಲೀಸ್​ ಇಲಾಖೆ ಕಾರ್ಯಾಚರಣೆ ನಡೆಸಿದೆ. ಜಿಲ್ಲೆಯಲ್ಲಿ ಪಾಕಿಸ್ತಾನದ ಯಾವ ಪ್ರಜೆಗಳೂ ಇಲ್ಲ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಅರುಣ ಕೆ. ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ದಾಳಿಯ ಬಳಿಕ ಎಲ್ಲ ರಕ್ಷಣಾ ಸಂಸ್ಥೆಗಳಂತೆಯೇ ಕರಾವಳಿ ಕಾವಲು ಪಡೆಯೂ ಸಹ ಅತ್ಯಂತ ಹೆಚ್ಚಿನ ಭದ್ರತೆ ವಹಿಸಿದ್ದೇವೆ. ನಮ್ಮ ವ್ಯಾಪ್ತಿಗೆ ಬರುವ 320 ಕಿ.ಮೀ. ಸಮುದ್ರದಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ನಮ್ಮ ಬೋಟ್​ಗಳ ಮೂಲಕ ನಿರಂತರ ಗಸ್ತು ಮಾಡುತ್ತಿದ್ದು, ಬೀಚ್​ ಪಾಯಿಂಟ್​ಗಳಲ್ಲೂ ಭದ್ರತೆ ಹೆಚ್ಚಿಸಿದ್ದೇವೆ. ಇಂಡಿಯನ್​ ಕೋಸ್ಟ್​ ಗಾರ್ಡ್​ ಜತೆಯೂ ಸಹ ನಿರಂತರ ಮಾಹಿತಿ ವಿನಿಮಯಯೊಂದಿಗೆ ಜಂಟಿ ಗಸ್ತು ನಡೆಸಿದ್ದೇವೆ. | ಮಿಥುನ್​ ಎಚ್​.ಎನ್​. ಎಸ್ಪಿ, ಕರಾವಳಿ ಕಾವಲು ಪಡೆ