ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ರಸ್ತೆ, ಮನೆ ಹಾಗೂ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಪರಿಹಾರ ಮರೀಚಿಕೆಯಾಗಿದೆ. ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತ್ವರಿತವಾಗಿ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ಆಗ್ರಹಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೆಪ್ಟೆಂಬರ್ 6ರಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರಸ್ತೆಗಳೆಲ್ಲ ಹೊಂಡಮಯವಾಗಿದೆ. ರಸ್ತೆಯೇ ಕಾಣದ ರೀತಿಯಲ್ಲಿ ಗುಂಡಿಗಳು ಬಿದ್ದಿವೆ. ಅಪಘಾತಗಳೂ ಹೆಚ್ಚುತ್ತಿದ್ದು ಸಾವು-ನೋವುಗಳೂ ಹೆಚ್ಚುತ್ತಿದೆ. ಯಾವುದೇ ಸಮಸ್ಯೆ ನಿವಾರಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯಕ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಹ ಪ್ರಮುಖ ಗಿರೀಶ ಅಂಚನ್ ಇದ್ದರು.
ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ಕೆ., ಕೇಂದ್ರ ಸರ್ಕಾರದ ಜಿಎಸ್ಟಿ ದರ ಕಡಿತದಿಂದ ಆಗುವ ಪ್ರಯೋಜನ ಹಾಗೂ ಯಾವೆಲ್ಲ ವಸ್ತುಗಳಿಗೆ ದರ ಕಡಿಮೆಯಾಗಲಿದೆ ಎಂಬ ಕುರಿತು ಸಮಗ್ರ ಮಾಹಿತಿ ನೀಡಿದರು. ದೇಶದ ಮುಂದಿನ ಪೀಳಿಗೆಗೆ ನೆರವಾಗಲು ಹಾಗೂ ಸಅಮಾನ್ಯ ಜನರ ಜೀವನ ಮಟ್ಟ ಸುಧಾರಿಸಲು, ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಪ್ರೋತ್ಸಾಹಿಸಲು ಜಿಎಸ್ಟಿ ಅಳವಡಿಕೆಯ 8 ವರ್ಷದ ಬಳಿಕ 56ನೇ ಕೌನ್ಸಿಲ್ ಸಭೆಯಲ್ಲಿ 175 ವಸ್ತುಗಳ ಮೇಲಿನ ತೆರಿಗೆ ಕಡಿತ ಮಾಡಲಾಗಿದೆ. 4 ಮುಖ್ಯ ತೆರಿಗೆ ದರದಿಂದ 2ಕ್ಕೆ ಇಳಿಕೆ ಮಾಡಲಾಗಿದೆ. ಜೀವ-ಆರೋಗ್ಯ ವಿಮೆ, ಶೈಕ್ಷಣಿಕ ವಸ್ತುಗಳಿಗೆ ಶೂನ್ಯ ತೆರಿಗೆ, ಎಲ್ಲ ನಿತ್ಯ ಉಪಯೋಗಿ ವಸ್ತುಗಳು, ಟ್ರಾಕ್ಟರ್ ಸಹಿತ ಕೃಷಿ ಉಪಕರಣ ಶೇ.18ರಿಂದ ಶೇ.5ಕ್ಕೆ, ಆರೋಗ್ಯ ಸಂಬಂಧಿತ ವಸ್ತುಗಳು ಶೇ.12ರಿಂದ ಶೇ.5ಕ್ಕೆ, ಕಾರು ಇನ್ನಿತರ ವಾಹನ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳು ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ಈ ಕ್ರಮದಿಂದ ಕೇಂದ್ರ ಸರ್ಕಾರಕ್ಕೆ 48 ಸಾವಿರ ಕೋಟಿ ರೂ. ನಷ್ಟ ಆಗಲಿದೆ ಎಂದು ಮಾಹಿತಿ ನೀಡಿದರು.