ಜಿಲ್ಲೆ

ಮೇ 8ರಂದು ಮತದಾರರಲ್ಲದವರು ಕ್ಷೇತ್ರ ತೊರೆಯಲು ಜಿಲ್ಲಾಧಿಕಾರಿ ಸೂಚನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲೆಯಲ್ಲಿ ಮೇ 10 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಪ್ರಚಾರಕರು, ಕಾರ್ಯಕರ್ತರು, ಮೆರವಣಿಗೆ ಅಯೋಜಕರು ಸೇರಿದಂತೆ ನಿಗದಿತ ನಾಗರಿಕರು ಮೇ 8ರಂದು ಸಾಯಂಕಾಲ 6 ಗಂಟೆಯೊಳಗೆ ಕ್ಷೇತ್ರ ಬಿಟ್ಟು ತೆರಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಸಿದ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆಯು ಮುಕ್ತ , ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕಾದ ಹಿನ್ನಲೆಯಲ್ಲಿ ಮತದಾನಕ್ಕೆ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಲ್ಲದವರು ನಿಗದಿತ ಸಮಯಕ್ಕಿಂತ ಮುಂಚೆ ಹೊರಹೋಗಬೇಕು ಎಂದರು.

ಯಾವುದೇ ರಾಜಕೀಯ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪ್ರಚಾರಕ್ಕಾಗಿ ವಿಧಾನಸಭಾ ಕ್ಷೇತ್ರದ ಹೊರಗಿನಿಂದ ಬಂದು ಉಳಿದುಕೊಂಡಿದ್ದಲ್ಲಿ ಅಂತಹವರು ನಿಗಧಿಪಡಿಸಿರುವ ಕಾಲಕ್ಕಿಂತ ಮುಂಚೆ ಕ್ಷೇತ್ರದಿಂದ ಹೊರಗೆ ಹೋಗಬೇಕು. ವಸತಿಗೃಹಗಳಲ್ಲಿ , ಕಲ್ಯಾಣ ಮಂಟಪಗಳಲ್ಲಿ ಉಳಿದುಕೊಳ್ಳಲು ಆಸ್ಪದ ನೀಡಬಾರದು. ಅನಧಿಕೃತವಾಗಿ ಉಳಿದುಕೊಂಡಿರುವ ಬಗ್ಗೆ ಮಾಹಿತಿಯಿದ್ದಲ್ಲಿ ಜಿಲ್ಲಾಡಳಿತ ಅಥವಾ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿಗೆ ನೀಡಬೇಕು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು , ಪಕ್ಷದ ಸಂಘಟಕರು ಅನಧಿಕೃತವಾಗಿ ನೆಲೆಸಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ಆಶ್ರಯ ನೀಡುವವರ ಮೇಲೆಯೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತದಾನಕ್ಕೆ ನಿಗಧಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಸಬೇಕಾದರೆ ಸಂಬಂದಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಾಮಾಣಿಕರಣ ಸಮಿತಿ ವತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.

ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ, ತರಬೇತಿ ನಿರತ ಐ.ಎ.ಎಸ್ ಆಧಿಕಾರಿ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.