ಜಿಲ್ಲೆ

ಅಂಬೇಡ್ಕರ್​ ಜಯಂತಿ ಆಚರಣೆಗೆ ಸಕಲ ಸಿದ್ಧತೆ

ಉಡುಪಿ: ಜಿಲ್ಲೆಯಲ್ಲಿ ಏ. 5 ರಂದು ಡಾ.ಬಾಬು ಜಗಜೀವನರಾಂ 118 ನೇ ಜಯಂತಿ ಹಾಗೂ ಏ. 14 ರಂದು ಡಾ.ಬಿ.ಆರ್​. ಅಂಬೇಡ್ಕರ್​ ಅವರ 134 ನೇ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್​. ಅಂಬೇಡ್ಕರ್​ ಜನ್ಮ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಬಿ.ಆರ್​.ಅಂಬೇಡ್ಕರ್​ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಳೆದ ಬಾರಿಯ ಎಸ್​.ಎಸ್​.ಎಲ್​.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಪ್ರತಿಭಾನ್ವಿತ ನಿಲಯಾರ್ಥಿಗಳು, ನಗರಸಭೆಯ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಅಂತರ್​ ಜಾತಿ ವಿವಾಹವಾದ ಮೂವರು ದಂಪತಿಗೆ ಪ್ರೋತ್ಸಾಹಧನ ವಿತರಿಸಲಾಗುವುದು ಎಂದರು.

ಎಲ್ಲ ತಾಲೂಕು ಕಚೇರಿ, ಶಾಲಾ-ಕಾಲೇಜು, ಗ್ರಾಮ ಪಂಚಾಯತಿ ಹಾಗೂ ಇತರೆ ಕಚೇರಿಗಳಲ್ಲಿ ಡಾ. ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಯನ್ನು ಕಡ್ಡಾಯವಾಗಿ ಆಚರಿಸಬೇಕು. ಡಾ.ಅಂಬೇಡ್ಕರ್​ ಅವರ ಜೀವನ ಚರಿತ್ರೆ ಕುರಿತು ಶಾಲಾ, ಕಾಲೇಜು ಹಂತದಲ್ಲಿ ಭಾಫಿಣ, ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲಾ ಪೊಲೀಸ್​ ಅಧಿಕ್ಷಕ ಡಾ. ಅರುಣ್​ ಕೆ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ ಎಂ. ಮತ್ತಿತರರು ಉಪಸ್ಥಿತರಿದ್ದರು.

ಜನ್ಮ ದಿನಾಚರಣೆ

ಏಪ್ರಿಲ್​ 5 ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕೋರ್ಟ್​ ಹಾಲ್​ ನಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್​ 118 ನೇ ಜನ್ಮ ದಿನಾಚರಣೆ ಹಾಗೂ ಏ. 14 ರಂದು ಬೆಳಗ್ಗೆ 10 ಕ್ಕೆ ನಗರದ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಭಾರತರತ್ನ ಡಾ.ಬಿ.ಆರ್​.ಅಂಬೇಡ್ಕರ್​ 134ನೇ ಜನ್ಮ ದಿನಾಚರಣೆ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ, ಬುದ್ಧ ವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.