ಜಿಲ್ಲೆ

ಕರೊನಾ ಪರೀಕ್ಷೆಗೆ ಕರಾವಳಿ ಒತ್ತು, ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಾದರಿ ಸಂಗ್ರಹ ಪ್ರಮಾಣ ಹೆಚ್ಚಳ

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೇವಲ 12 ಪಾಸಿಟಿವ್ ಕರೊನಾ ಪ್ರಕರಣಗಳಷ್ಟೇ ವರದಿಯಾಗಿದ್ದು, 8 ದಿನಗಳಿಂದ ಎಲ್ಲ ಸ್ಯಾಂಪಲ್‌ಗಳೂ ನೆಗೆಟಿವ್ ಆಗಿರುವ ವಿಶ್ವಾಸದೊಂದಿಗೆ ಆರೋಗ್ಯ ಇಲಾಖೆ ‘ಸ್ಯಾಂಪಲ್ ಟೆಸ್ಟಿಂಗ್’ ವಿಸ್ತೃತಗೊಳಿಸಲು ಮುಂದಾಗಿದೆ.

ಇದುವರೆಗೆ 480 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಪ್ರಸ್ತುತ ಹೊರದೇಶಗಳಿಂದ ಬಂದವರು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲರದ್ದೂ ನೆಗೆಟಿವ್ ಎಂದು ವರದಿ ಬಂದಿದೆ. ಬೇರೆ ರಾಜ್ಯಗಳಿಂದ ಬಂದವರನ್ನೂ ಕ್ವಾರಂಟೈನ್ ಮಾಡಿ ತಪಾಸಣೆ ಮಾಡಲಾಗಿದ್ದು, ಅವರೆಲ್ಲ ಕರೊನಾ ಮುಕ್ತರಾಗಿದ್ದಾರೆ. ಈಗ ವಿಸ್ತೃತ ಟೆಸ್ಟಿಂಗ್ ಕುರಿತು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಸ್ತೃತ ಪ್ರಮಾಣದಲ್ಲಿ ಪರೀಕ್ಷೆ: ದೊಡ್ಡ ಪ್ರಮಾಣದಲ್ಲಿ ಕರೊನಾ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಜಿಲ್ಲೆಯಲ್ಲಿ ಮಂಗಳೂರು ತಾಲೂಕನ್ನು ಪೂರ್ಣವಾಗಿ ತೆಗೆದುಕೊಳ್ಳಲಾಗುವುದು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಎರಡು ಮಾನದಂಡಗಳಲ್ಲಿ ಸಮೀಕ್ಷೆ ನಡೆಸುವರು.

1. ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ). 2. ಇನ್‌ಫ್ಲುಯೆಂಜಾ ರೀತಿಯ ರೋಗ (ಐಎಲ್‌ಎಂ).

ಇವೆರಡರ ಲಕ್ಷಣಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಂದ ಕಲೆ ಹಾಕಿದ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಲಿದ್ದು, ಅದರ ಆಧಾರದಲ್ಲಿ ಸ್ಯಾಂಪ್ಲಿಂಗ್ ನಡೆಸಲಾಗುವುದು.

ಜಿಲ್ಲೆಯ ಇತರೆಡೆ ಪಾಸಿಟಿವ್ ಇದ್ದ ಕಡೆ: ಮಂಗಳೂರು ತಾಲೂಕು ಬಿಟ್ಟು ಜಿಲ್ಲೆಯ ಉಳಿದ ಭಾಗದಲ್ಲಿ ಎಲ್ಲೆಲ್ಲಿ ಕರೊನಾ ಪಾಸಿಟಿವ್ ರೋಗಿಗಳಿದ್ದರೋ, ಅಲ್ಲಿ ಅವರ ಮನೆಯ 7 ಕಿ.ಮೀ ಸುತ್ತಳತೆಯಲ್ಲಿ ಎಸ್‌ಎಆರ್‌ಐ/ಐಎಲ್‌ಎಂ ರೋಗ ಲಕ್ಷಣ ಹೊಂದಿದವರ ಗಂಟಲು ಕೋಶದ ಮಾದರಿ ಪಡೆದು ಪರೀಕ್ಷೆ ಕೈಗೊಳ್ಳಲಾಗುವುದು. ಸಾಮಾನ್ಯವಾಗಿ 3 ಕಿ.ಮೀ ಸುತ್ತಳತೆಯಿಂದ ಈ ಪರೀಕ್ಷೆ ಸಾಕಾಗುತ್ತದೆ, ಮತ್ತೆ 2 ಕಿ.ಮೀ ಬಫರ್ ರೆನ್ ಇರುತ್ತದೆ, ನಾವು ಯಾವುದಕ್ಕೂ ಇರಲಿ ಎಂಬ ಕಾರಣಕ್ಕೆ ಮತ್ತೂ 2 ಕಿ.ಮೀ. ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಂಡಿದ್ದೇವೆ.

 ಸಮುದಾಯಕ್ಕೆ ಹಬ್ಬಿದೆಯೇ?: ಈಗಾಗಲೇ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದವರನ್ನು ಪರೀಕ್ಷೆ ನಡೆಸಿದ್ದಾಗಿದೆ, ಇನ್ನು ಮುಂದಿನ ಕ್ರಮ ಸಮುದಾಯಕ್ಕೆ ರೋಗ ಹಬ್ಬಿದೆಯೇ ಎನ್ನುವುದನ್ನು ಪರಿಶೀಲನೆ ನಡೆಸುವುದಾಗಿದೆ. ಈಗಾಗಲೇ ಈ ಬಗ್ಗೆ ಸರ್ಕಾರದಿಂದ ಮಾರ್ಗದರ್ಶನವೂ ಬಂದಿದೆ. ಹಾಗಾಗಿ ಈಗ ನಡೆಸಲಾಗುವ ಸ್ಯಾಂಪ್ಲಿಂಗ್‌ನಿಂದ ಕಮ್ಯುನಿಟಿ ಪ್ರಸರಣದ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ಡಾ.ಬಾಯರಿ ತಿಳಿಸಿದ್ದಾರೆ.

ನಮ್ಮಲ್ಲೇ ಟೆಸ್ಟಿಂಗ್ ಅನುಕೂಲಕರ: ಇದುವರೆಗೆ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಸ್ಯಾಂಪಲ್ ಟೆಸ್ಟಿಂಗ್ ಮಾಡಲಾಗುತ್ತಿತ್ತು. ಆದರೆ ನಮ್ಮಲ್ಲೇ ಈಗ ವೈರಾಲಜಿ ಲ್ಯಾಬ್‌ನವರು ಟೆಸ್ಟಿಂಗ್ ಮಾಡುತ್ತಿರುವುದು ಅನುಕೂಲವಾಗಿದೆ. ಕಳೆದ ಮೂರು ದಿನಗಳಲ್ಲಿ ನಮ್ಮಲ್ಲಿ 157 ಸ್ಯಾಂಪಲ್ ಪರೀಕ್ಷೆ ಕೈಗೊಳ್ಳಲಾಗಿದೆ. ಈಗ ವಿಸ್ತೃತ ಟೆಸ್ಟಿಂಗ್ ಮಾಡುವುದಕ್ಕೆ ಇದೇ ಲ್ಯಾಬ್ ಸಹಕಾರ ದೊರೆಯಲಿದೆ. ಹೆಚ್ಚು ಸ್ಯಾಂಪಲ್ ಬರುವುದನ್ನು ಎರಡು ಪಾಳಿಯಲ್ಲಿ ನಿರ್ವಹಣೆ ಮಾಡಲಾಗುವುದು, ಕ್ಷಿಪ್ರವಾಗಿ ವರದಿಯೂ ಲಭಿಸಲಿದೆ ಎನ್ನುತ್ತಾರೆ ಡಿಎಚ್‌ಒ.

ತೊಕ್ಕೊಟ್ಟು ರೆಡ್‌ರೆನ್: 105 ಮಂದಿಯ ಮಾದರಿ ಸಂಗ್ರಹ

ಉಳ್ಳಾಲ: ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡ ಓರ್ವ ತೊಕ್ಕೊಟ್ಟಿನ ವ್ಯಕ್ತಿ ಕರೊನಾ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ತೊಕ್ಕೊಟ್ಟನ್ನು ಕರೊನಾ ರೆಡ್‌ರೆನ್ ಆಗಿ ಗುರುತಿಸಲಾಗಿದ್ದು, ಅಲ್ಲಿ ಸ್ಯಾಂಪ್ಲಿಂಗ್ ಮಾಡುವ ಕೆಲಸಕ್ಕೆ ಈಗಾಗಲೇ ಚಾಲನೆ ದೊರಕಿದೆ.

ಸೋಮವಾರ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಪರೀಕ್ಷೆ ನಡೆಸಲಾಯಿತು. ದೆಹಲಿಯಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದರಿಂದ ವ್ಯಕ್ತಿ ಸಂಚರಿಸಿದ ಪರಿಸರದ ನಿವಾಸಿಗರನ್ನು ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಅದರಂತೆ ಎರಡು ದಿನಗಳ ಹಿಂದೆ ಜಮಾತ್ ಸಮಿತಿ ಮಸೀದಿಯ ಧ್ವನಿವರ್ಧಕ ಬಳಸಿ ಸ್ಥಳೀಯರಿಗೆ ಮಾಹಿತಿ ನೀಡಿದೆ. ಸೋಮವಾರ 50 ವರ್ಷ ಮೀರಿದ ಒಟ್ಟು 105 ಮಂದಿಯ ಗಂಟಲಿನ ದ್ರವ ತೆಗೆದು ಕೊವಿಡ್-19 ಪರೀಕ್ಷೆಗೆ ಕಳುಹಿಸಲಾಗಿದೆ. ಶಾಸಕ ಯು.ಟಿ.ಖಾದರ್ ಪರೀಕ್ಷೆಗೊಳಪಟ್ಟು, ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ತಾಲೂಕು ಆರೋಗ್ಯಾಧಿಕಾರಿ ಸುಜಯ್, ನಿರ್ವಹಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನವೀನ್, ಮೈಕ್ರೋಬಯಾಲಜಿಸ್ಟ್ ವೀಣಾ ಜಯರಾಜ್, ಉಳ್ಳಾಲ ಸರ್ಕಾರಿ ಆಸ್ಪತ್ರೆ ಲ್ಯಾಬ್ ಟೆಕ್ನೀಷಿಯನ್ ದಿವ್ಯಾ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನೀಶಿಯನ್ ಜಲೀಲ್ ಭಾಗವಹಿಸಿದ್ದರು.

ಉಡುಪಿ ಜಿಲ್ಲೆಯಲ್ಲಿ 2ನೇ ಹಂತದ ಸಂಪರ್ಕಿತರ ತಪಾಸಣೆ ಆರಂಭ

ಉಡುಪಿ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ರೋಗಿಗಳ ಜತೆಗಿದ್ದವರೊಂದಿಗೆ ಸಂಪರ್ಕ ಹೊಂದಿದ್ದವರ(ಸೆಕೆಂಡರಿ ಕಾಂಟೆಕ್ಟ್) ಮಾದರಿ ಸಂಗ್ರಹ ಕಾರ್ಯ ಆರಂಭವಾಗಿದೆ. ಸೋಮವಾರ ಇಂಥ 51 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಗಹಿಸಲಾಗಿದೆ.

ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಇವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 282 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದೆಲ್ಲವೂ ನೆಗೆಟಿವ್ ಬಂದಿದ್ದು, ಈಗ ಸರ್ಕಾರದ ಆದೇಶದಂತೆ 2ನೇ ಹಂತದ ತಪಾಸಣೆ ಕಾರ್ಯ ನಡೆಯುತ್ತಿದೆ.

ದಿನಕ್ಕೆ 100 ಮಾದರಿ: 282 ಮಂದಿ ಜತೆಗೆ ಸಂಪರ್ಕ ಹೊಂದಿದ್ದ 1000ಕ್ಕೂ ಅಧಿಕ ಮಂದಿ ಜಿಲ್ಲೆಯಲ್ಲಿದ್ದು, ಹಂತ ಹಂತವಾಗಿ ಇವರೆಲ್ಲರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದಿನಕ್ಕೆ ಕನಿಷ್ಠ 100 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಕೆಲವರಿಗೆ ಆಸ್ಪತ್ರೆಗೆ ಖುದ್ದು ಹಾಜರಾಗಲು ಸೂಚನೆ ನೀಡಲಾಗಿದೆ. ಇನ್ನು ಕೆಲವೆಡೆ ಮೊಬೈಲ್ ಲ್ಯಾಬ್ ಮೂಲಕ ಮಾದರಿ ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ಮಾದರಿಗಳನ್ನು ಮಂಗಳೂರಿಗೆ ರವಾನಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಲ್ಯಾಬ್ ಪ್ರಾರಂಭವಾದರೆ ಇನ್ನೂ ಹೆಚ್ಚಿನ ಮಾದರಿ ಸಂಗ್ರಹಿಸಲು ಅನುಕೂಲವಾಗಲಿದೆ.