ಜಿಲ್ಲೆ

84 ಕರೊನಾ ಪಾಸಿಟಿವ್, 92 ಡಿಸ್ಚಾರ್ಜ್

Udupi

ಉಡುಪಿ: ಜಿಲ್ಲೆಯಲ್ಲಿ 84 ಮಂದಿಗೆ ಮಂಗಳವಾರ ಕರೊನಾ ಪಾಸಿಟಿವ್ ಬಂದಿದ್ದರೆ, ಅದಕ್ಕಿಂತ ಹೆಚ್ಚು ಮಂದಿ, ಅಂದರೆ 92 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಉಡುಪಿಯ 37, ಕುಂದಾಪುರ 43, ಕಾರ್ಕಳ 4 ಮಂದಿ ಸೇರಿದಂತೆ ಇಬ್ಬರು ಮಕ್ಕಳು 48 ಪುರುಷರು, 34 ಮಹಿಳೆಯರಿಗೆ ಸೋಂಕು ದೃಢವಾಗಿದೆ. ಇದರಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಸೇರಿದ್ದಾರೆ.

ಮಂಗಳವಾರ 103 ಮಂದಿಗೆ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. 103 ಮಂದಿಯ ಗಂಟಲದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 481 ಮಂದಿಯ ವರದಿ ಬರಲು ಬಾಕಿ ಇದೆ. ಇದುವರೆಗೆ 1742 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಸದ್ಯ 653 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಎಸ್‌ಪಿ ಕಚೇರಿ ಸೀಲ್‌ಡೌನ್ ಮಾಡಿಲ್ಲ: ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರೊಬ್ಬರಿಗೆ ಕರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸೀಲ್‌ಡೌನ್ ಮಾಡಿಲ್ಲ. ಸೀಮಿತ ಸಿಬ್ಬಂದಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

ಹೋಟೆಲ್‌ನ 18 ಸಿಬ್ಬಂದಿಗೆ ಸೋಂಕು: ಕರಾವಳಿ ಬೈಪಾಸ್ ಸಮೀಪ ಇರುವ ಮೀನೂಟ ಹೋಟೆಲ್ ಒಂದರ 18 ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದಿದೆ. ಕೆಲದಿನಗಳ ಹಿಂದೆ ಹೋಟೆಲ್ ಮಾಲೀಕರಿಗೆ ಸೋಂಕು ಪತ್ತೆಯಾಗಿತ್ತು. ಬಳಿಕ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದರು.

ಮೃತ ಯುವಕನಿಗೆ ಸೋಂಕು: ಕಿಡ್ನಿ ತೊಂದರೆಗಾಗಿ 15 ದಿನಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೇರಳದ ಕಣ್ಣೂರು ಜಿಲ್ಲೆಯ 35 ವರ್ಷದ ಯುವಕ ಸೋಮವಾರ ರಾತ್ರಿ ಮೃತಪಟ್ಟಿದ್ದು, ಕರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಎನ್‌ಎಫ್ ಕ್ಯಾಂಪ್ ಸೀಲ್‌ಡೌನ್

ಕಾರ್ಕಳ: ರಾಮಸಮುದ್ರ ಹಾಗೂ ಕುಕ್ಕುಂದೂರಿನಲ್ಲಿ ಇರುವ ನಕ್ಸಲ್ ನಿಗ್ರಹ ದಳದ ಕೆಲವು ಸಿಬ್ಬಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದರಿಂದ ಕ್ಯಾಂಪ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕಾರ್ಕಳದ ಹೋಟೆಲ್‌ನಲ್ಲಿ ದುಡಿಯುತ್ತಿದ್ದ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದ್ದರಿಂದ ಹೋಟೆಲ್ ಸೀಲ್‌ಡೌನ್ ಮಾಡಲಾಗಿದೆ.