ಜಿಲ್ಲೆ

ಚಿಕಿತ್ಸೆ ಆರಂಭಿಸುವಷ್ಟರಲ್ಲೇ ಮೃತರಾದರು

Udupi

ಉಡುಪಿ: ದಾವಣಗೆರೆಯಿಂದ ಜುಲೈ 9ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ 72 ವರ್ಷದ ವ್ಯಕ್ತಿ ಚಿಕಿತ್ಸೆಗೆ ಬಂದಿದ್ದರು. ಹೃದ್ರೋಗ ಸಮಸ್ಯೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಆಗಮಿಸಿದಾಗ ಅವರ ಗಂಟಲದ್ರವ ಮಾದರಿ ಸಂಗ್ರಹಿಸಿ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್-19 ಟಿಎಂಎಪೈ ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಆರಂಭಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಮೂಲತಃ ದಾವಣಗೆರೆಯವರು ಆಗಿರುವುದರಿಂದ ಇದನ್ನು ಉಡುಪಿ ಜಿಲ್ಲೆಯ ಪ್ರಕರಣವೆಂದು ಪರಿಗಣಿಸುವುದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಜಿಲ್ಲೆಯಲ್ಲಿ 41 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಸ್ಥಳೀಯವಾಗಿ 32 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 6 ಮಂದಿ ಅಂತರ್‌ಜಿಲ್ಲಾ ಪ್ರವಾಸ, ಇಬ್ಬರು ಮುಂಬೈ, ಒಬ್ಬರು ಸೌದಿಯಿಂದ ಆಗಮಿಸಿದವರಿಗೆ ಸೋಂಕು ಕಂಡು ಬಂದಿದೆ. ಇದರಲ್ಲಿ 26 ಮಂದಿ ಪುರುಷರು, 11 ಮಹಿಳೆಯರು, 4 ಮಕ್ಕಳಿದ್ದು, 26 ಮಂದಿ ಉಡುಪಿ, 11 ಕುಂದಾಪುರ, 4 ಮಂದಿ ಕಾರ್ಕಳದವರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1608ಕ್ಕೆ ಏರಿಕೆಯಾಗಿದೆ.

649 ನೆಗೆಟಿವ್: ಭಾನುವಾರ 573 ಮಂದಿಯ ವರದಿ ನೆಗೆಟಿವ್ ಬಂದಿದೆ. 649 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 28 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 1273 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 332 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸ್ವಯಂಪ್ರೇರಿತವಾಗಿ ಕ್ವಾರಂಟೈನ್, ಹೊರಗಿನಿಂದ ಬರುವವರಿಗೆ ಉಡುಪಿ ಜಿಲ್ಲಾಡಳಿತ ಸೂಚನೆ

ಕುಂದಾಪುರ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್ ವಿಧಿಸಿರುವ ಕಾರಣ ಆ ಜಿಲ್ಲೆಗಳಿಂದ ಇನ್ನೆರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಜನರು ಬರುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಬಂದವರು ಸ್ವಯಂಪ್ರೇರಿತರಾಗಿ ಮನೆಯಲ್ಲಿ ಕ್ವಾರಂಟೈನ್ ಆಗಬೇಕು ಎಂದು ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ.

ಕುಂದಾಪುರದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸುದ್ದಿಗಾರರೊಂದಿಗೆ ಮಾತನಾಡಿ, ಅಂಗನವಾಡಿ ಕಾರ್ಯಕರ್ತರನ್ನು ಬಳಸಿ ಮನೆ ಮನೆ ಸರ್ವೇ ಮಾಡಲಾಗುವುದು. ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಬಂದವರು, ಸಾರಿ, ಐಎಲ್ಐ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.

ಹೋಂ ಕ್ವಾರಂಟೈನ್ ಉಲ್ಲಂಘನೆ

ಕುಂದಾಪುರ: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸಹಬ್ ಸಿಂಗ್ ಎಂಬುವರ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಬ್ ಸಿಂಗ್ ಮುಂಬೈಗೆ ತೆರಳಿ ಜೂನ್ 29ರಂದು ವಾಪಸಾಗಿದ್ದು, ಕೋಟೇಶ್ವರದ ಬೈಪಾಸ್ ಹತ್ತಿರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜುಲೈ 13ರವರೆಗೆ ಹೋಂ ಕ್ವಾರಂಟೈನ್ ಅವಧಿ ಇದ್ದು, ಗ್ರಾಮಕರಣಿಕರ ವರದಿಯಂತೆ 163 ಬಾರಿ ನಿಯಮ ಉಲ್ಲಂಘನೆ ಮಾಡಿ ಹೊಟೇಲ್ಗಳಿಗೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಜುಲೈ 12ರಂದು ಸಾಯಂಕಾಲ 4.15ಕ್ಕೆ ಫ್ಲಯಿಂಗ್ ಸ್ಕ್ವಾಡ್ ಅಧಿಕಾರಿ ಎನ್.ಜಿ ಭಟ್ ಸ್ಥಳಕ್ಕೆ ಭೇಟಿ ನೀಡಿದಾಗ ಸಹಬ್ ಸಿಂಗ್ ಹೋಂ ಕ್ವಾರಂಟೈನ್ ಸ್ಥಳದಲ್ಲಿ ಇರಲಿಲ್ಲ. ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.