ಜಿಲ್ಲೆ

ಉಡುಪಿಯಲ್ಲಿ 4 ಕರೊನಾ ಪಾಸಿಟಿವ್

Udupi

ಉಡುಪಿ: ಜಿಲ್ಲೆಯಲ್ಲಿ ಬುಧವಾರ ನಾಲ್ವರಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ ಮೂವರು ಮತ್ತು ಸ್ಥಳೀಯ ಒಬ್ಬರು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.

ಬುಧವಾರ 14 ಮಂದಿಯ ವರದಿ ನೆಗೆಟಿವ್ ಬಂದಿದ್ದು, 34 ಮಂದಿಯ ಮಾದರಿ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಐಸೊಲೇಶನ್ ವಾರ್ಡ್‌ನಿಂದ 13 ಮಂದಿ ಡಿಸ್ಚಾರ್ಜ್ ಆಗಿದ್ದು, 5 ಮಂದಿ ದಾಖಲಾಗಿದ್ದಾರೆ. ಬುಧವಾರ 19 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ನೆಗೆಟಿವ್ ವರದಿ ಪಡೆದು ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 908 ಮಂದಿ ಡಿಸ್ಚಾರ್ಜ್ ಆಗಿದ್ದು 130 ಪ್ರಕರಣ ಸಕ್ರಿಯವಾಗಿದೆ.

ಸೋಂಕಿತ ಗರ್ಭಿಣಿಗೆ ಹೆರಿಗೆ: ಕರೊನಾ ಸೋಂಕಿತ 22 ವರ್ಷದ ಗರ್ಭಿಣಿಯೊಬ್ಬರು ಕೋವಿಡ್-19 ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕಾರ್ಕಳ ಮೂಲದ ಈ ಮಹಿಳೆಗೆ 15ರಂದು ಸೋಂಕು ದೃಢಪಟ್ಟಿತ್ತು. ಮಹಿಳೆಗೆ 9 ತಿಂಗಳು ತುಂಬಿದ್ದು, ಹೈ ರಿಸ್ಕ್ ವರ್ಗದಲ್ಲಿ ಕೋವಿಡ್-19 ಟಿ.ಎಂಎಪೈ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆಸ್ಪತ್ರೆ ತಜ್ಞ ವೈದ್ಯರ ತಂಡ ಸುರಕ್ಷತಾ ಕ್ರಮಗಳೊಂದಿಗೆ ಸಿಸೇರಿಯನ್ ಹೆರಿಗೆ ಮಾಡಿದ್ದಾರೆ. ಪ್ರಸೂತಿ ತೊಂದರೆ ಕಾರಣಗಳಿಂದಾಗಿ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಸದ್ಯ ತಾಯಿ -ಮಗು ಆರೋಗ್ಯವಾಗಿದ್ದಾರೆ. ಮಗುವಿಗೆ ಐದು ದಿನ ಬಳಿಕ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಮಹಿಳೆಗೆ ಜೂ.22ರಂದು ಮರು ಪರೀಕ್ಷೆ ನಡೆಸಲಾಗುವುದು ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ. ಪ್ರಸೂತಿ ಶಸ್ತ್ರಚಿಕಿತ್ಸಕರಾದ ಡಾ.ಶಶಿಕಲಾ ಕೆ.ಭಟ್, ಡಾ. ಸುರಭಿ ಸಿನ್ಹಾ ಮತ್ತು ಅರಿವಳಿಕೆ ತಜ್ಞ ಡಾ.ರೋಶನ್ ಶೆಟ್ಟಿ ಶುಶ್ರೂಷಕರಾದ ವೆರೋನಿಕಾ, ಅಶ್ವಿನಿ, ಜಯಶ್ರೀ ಮತ್ತು ನವಜಾತ ಶಿಶುವಿನ ಆರೈಕೆಯನ್ನು ಡಾ.ಆಶಿಶ್ ಗುಪ್ತಾ ಮತ್ತು ಡಾ.ಚೈತನ್ಯ ನೋಡಿಕೊಂಡಿದ್ದಾರೆ. ವೈದ್ಯಕೀಯ ತಂಡಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿನಂದನೆ ಸಲ್ಲಿಸಿದ್ದಾರೆ.