ಜಿಲ್ಲೆ

ಉಡುಪಿ ಪ್ರಕರಣ ಉನ್ನತಮಟ್ಟದ ತನಿಖೆಗೊಳಪಡಿಸಿ: ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಉಡುಪಿಯ ಜ್ಯೋತಿ ನರ್ಸಿಂಗ್ ಕಾಲೇಜಿನ ಶೌಚಗೃಹದಲ್ಲಿ ಕ್ಯಾಮೆರಾ ಇರಿಸಿ ಹೆಣ್ಣು ಮಕ್ಕಳ ವೈಯಕ್ತಿಕ ಚಿತ್ರ ತೆಗೆದು ಹಂಚಿಕೆ ಮಾಡಿರುವ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸುವುದರ ಜತೆಗೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶೌಚಗೃಹದಲ್ಲಿ ಹಿಡನ್ ಕ್ಯಾಮೆರವಿಟ್ಟು ವೈಯಕ್ತಿಕ ಚಿತ್ರಗಳನ್ನು ತೆಗೆದ ಮೂವರು ಮುಸ್ಲಿಂ ಹೆಣ್ಣು ಮಕ್ಕಳ ವಿರುದ್ಧ ಉಡುಪಿ ಪೋಲಿಸರು ಎಫ್‌ಐಆರ್ ದಾಖಲಿಸಿದ್ದು, ಇದುವರೆವಿಗೂ ಬಂಧಿಸಿಲ್ಲ. ವಿಡಿಯೋ ರಹಸ್ಯ ಸೆರೆ ಹಿಂದೆ ದೇಶ ವಿರೋಧಿ ಸಂಘಟನೆಗಳ ಕೈವಾಡವಿದ್ದು, ಚಿತ್ರೀಕರಣ ಮಾಡಿದ ವಿಡಿಯೋಗಳನ್ನು ಕೆಲ ಯುವಕರಿಗೆ ರವಾನಿಸಿರುವ ಬಗ್ಗೆ ಅನುಮಾನವಿದೆ. ಪ್ರಕರಣದ ಗಂಭೀರತೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋದಮ್ಮ, ಮುಖಂಡರಾದ ವಿದ್ಯಾ ನಾಗೇಂದ್ರ, ಸುಜಾತಾ ಕೃಷ್ಣ, ರೂಪಾ, ಸುಕನ್ಯಾ, ಶ್ವೇತಾ, ಮಮತಾ, ರಂಜಿತಾ ಇತರರಿದ್ದರು.