ಜಿಲ್ಲೆ

ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನೆಲೆ: ಫೆ.19ರವರೆಗೆ ದ.ಕ, ಉಡುಪಿ ಜಿಲ್ಲೆಗಳಲ್ಲಿ ನಿಷೇಧಾಜ್ಞೆ

Dakshina Kannada

ಮಂಗಳೂರು/ಉಡುಪಿ: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಫೆ.14ರ ಮುಂಜಾನೆ 6ರಿಂದ ಫೆ.19ರ ಸಂಜೆ 6 ಗಂಟೆಯವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳ 200 ಮೀಟರ್ ವ್ಯಾಪ್ತಿಯೊಳಗೆ ಸೆ.144ಅನ್ನು ಜಾರಿಗೊಳಿಸಿ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ.

ಕಾನೂನು ಭಂಗ ಮಾಡುವ ಉದ್ದೇಶದಿಂದ ಶಾಲಾ, ಕಾಲೇಜಿನ 200 ಮೀಟರ್ ಸುತ್ತಮುತ್ತ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ, ಮೆರವಣಿಗೆ, ಸಭೆ ನಡೆಸುವಂತಿಲ್ಲ. ಆಯುಧ, ಕುಡುಗೋಲು, ಖಡ್ಗ, ಭರ್ಜಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಅದಕ್ಕೆ ಪೂರಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಈ ಆದೇಶ ಸರ್ಕಾರ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಡಳಿತಗಳು ಸ್ಪಷ್ಟಪಡಿಸಿವೆ.