ಜಿಲ್ಲೆ

ನಳ್ಳಿ ನೀರಿನ ಜತೆ ಗಾಳಿಗೂ ನಗರಸಭೆ ಬಿಲ್!

ಗೋಪಾಲಕೃಷ್ಣ ಪಾದೂರ್

ಉಡುಪಿ: ನಗರದ ಜತೆಗೆ ನಳ್ಳಿ ನೀರಿನ ಜತೆಗೆ ಗಾಳಿಗೂ ಬಿಲ್ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಯುಐಡಿಎಫ್‌ಸಿ ಹೊಸ ಮೀಟರ್ ಅಳವಡಿಕೆಯಿಂದ ತಿಂಗಳಿಗೆ 300 ರೂ. ಬರುತ್ತಿದ್ದ ವಾಟರ್‌ ಬಿಲ್ 1 ಸಾವಿರಕ್ಕೆ ಏರಿಕೆಯಾಗಿದೆ ಎಂದು ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಅನೇಕ ವಾರ್ಡ್‌ಗಳಲ್ಲಿ ನೀರಿನ ಬಿಲ್ ದುಪ್ಪಟ್ಟುಗೊಂಡಿರುವ ಬಗ್ಗೆ ವಾರಾಹಿ ನೀರು ಸರಬರಾಜು ಯೋಜನೆ ಅಧಿಕಾರಿಗಳಿಂದ ಸದಸ್ಯರು ಸ್ಪಷ್ಟನೆ ಬಯಸಿದರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ರಾಜಶೇಖರ್, ನೀರು ಬಾರದ ಸಂದರ್ಭದಲ್ಲಿ ಪೈಪ್‌ನಲ್ಲಿ ಗಾಳಿ ಸೇರಿಕೊಂಡರೆ ಮೀಟರ್‌ ರೀಡ್‌ ಅಗುತ್ತದೆ. ಹೀಗಾಗಿ ಬಿಲ್‌ನಲ್ಲಿ ವ್ಯತ್ಯಾಸವಾಗಿದೆ. ಇದಕ್ಕೆ ಏರ್‌ವಾಲ್ ಅಳವಡಿಸಿದರೆ ಸರಿಹೋಗುತ್ತದೆ ಎಂದು ಉತ್ತರಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್, ಹಿಂದಿನ ಸಭೆಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಿ ಎಂದಾಗ ಈ ಮೀಟರ್ ಒಳ್ಳೆದಿದೆ ಎಂದು ಹೇಳಿದ್ದೀರಿ ಈಗ ಸಮಸ್ಯೆ ಗೋಚರಿಸಿದೆ. ಹೀಗಾಗಿ ಎಲ್ಲಾ ಮೀಟರ್‌ಗಳನ್ನು ಬದಲಿಸಬೇಕು ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್, 24*7 ನೀರುಪೂರೈಕೆಗೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ. ಈಗಾಗಲೇ 8000 ಮೀಟರ್ ಅಳವಡಿಸಲಾಗಿದೆ. ಎತ್ತರದ ಪ್ರದೇಶಗಳಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸಲಾಗುವುದು ಎಂದರು.
ಮೀಟರ್‌ ಸಮುದ್ರಕ್ಕೆ ಬೀಸಾಡಿ
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಭಟ್‌, ವಾರಾಹಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯೇ ಸಮರ್ಪಕವಾಗಿ ನಡೆಯುತ್ತಿಲ್ಲ. ಜನರಿಂದ ನಿರಂತರ ದೂರುಗಳು ಬರುತ್ತಿವೆ. ನಿಮ್ಮ ಮೀಟರ್‌ಗಳನ್ನು ಸಮುದ್ರಕ್ಕೆ ಬೀಸಾಡಿ. ಪೌರಾಯುಕ್ತರು ಬಾಕಿ ಬಿಲ್‌ಗಳನ್ನು ಪಾವತಿಸಬಾರದು. ಒಂದು ವೇಳೆ ಬಿಲ್ ಪಾವತಿ ಮಾಡಿದರೆ ನಾನೇ ನಿಮ್ಮ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ನಗರಸಭೆಯ ಇಇ ಸ್ಥಳ ಪರಿಶೀಲನೆ ಮಾಡಿ ನನಗೆ ವರದಿ ನೀಡಬೇಕು. ಎಸಿಬಿ ದಾಳಿಗೆ ಒಳಗಾಗಿದ್ದ ಭ್ರಷ್ಟ ಅಧಿಕಾರಿಯನ್ನು ಕೆಯುಐಡಿಎಫ್‌ಸಿ ಯೋಜನಾ ನಿರ್ದೇಶಕನನ್ನಾಗಿ ಮಾಡಿದ್ದರಿಂದ ಇಂಥ ಅಧ್ವಾನಗಳಾಗುತ್ತಿವೆ. ನಮಗೆ ಈ ಮೀಟರ್ ಬೇಡ ಎಂದರು.
ಯೋಜನೆ ಕುಂದುಕೊರತೆ ಪಟ್ಟಿ ಮಾಡಿ ಸರ್ಕಾರಕ್ಕೆ ಪತ್ರ ಬರೆಯಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.