ಉಡುಪಿ: ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಆಟೋನಿಲ್ದಾಣಗಳಿಂದ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಜಾಗ ಸಿಗುತ್ತಿಲ್ಲ. ಇದರಿಂದ ಸಂಚಾರ ದಟ್ಟಣೆ ತಲೆದೋರುತ್ತಿದೆ ಎಂದು ನಗರಸಭಾ ಸದಸ್ಯರು ಆರೋಪಿಸಿದರು.
ಸೋಮವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯ ಗಿರೀಶ್ ಅಂಚನ್ ಮಾತನಾಡಿ, ಉಡುಪಿ ನಗರಭಾಗದ ಹಲವೆಡೆ ಪ್ರಮುಖ ಜಾಗದಲ್ಲಿ ದಿಢೀರ್ ಆಟೋ ರಿಕ್ಷಾ ತಂಗುದಾಣಗಳು ತಲೆಎತ್ತುತ್ತಿವೆ. ಇದರಿಂದ ಸಂಚಾರ ದಟ್ಟಣೆಗೆ ಉಂಟಾಗುತ್ತಿದೆ. ಪಾದಚಾರಿಗಳು ಕೂಡ ಸಮಸ್ಯೆ ಎದುರಿಸುವಂತಾಗಿದೆ. ಆಟೋ ಚಾಲಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದು, ಠಾಣೆಯವರೆಗೂ ತಲುಪುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ನಗರಭಾಗದ ಆಟೋರಿಕ್ಷಾ ತಂಗುದಾಣದ ಸಮಸ್ಯೆಗಳ ಬಗ್ಗೆ ಈಗಾಗಲೇ ಆರ್ಟಿಒ ಹಾಗೂ ನಗರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಇದಕ್ಕೆ ಪ್ರತ್ಯೇಕ ಬೈಲಾ ಸಿದ್ಧಪಡಿಸಲಾಗುವುದು. ರಿಕ್ಷಾ ತಂಗುದಾಣಗಳನ್ನು ನಗರಸಭೆಯ ಮೂಲಕವೇ ನಿರ್ಮಾಣ ಮಾಡಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಇಂತಹ ತಂಗುದಾಣಗಳಲ್ಲಿ ನಗರಭಾಗದ ಚಾಲಕರಿಗೆ ಪ್ರಥಮ ಪ್ರಾಶಸ ನೀಡಲಾಗುವುದು ಎಂದರು.
ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಆದಿಉಡುಪಿ ಮೀನು ಮಾರುಕಟ್ಟೆಯಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ನಗರದ ಹಲವೆಡೆ ತ್ಯಾಜ್ಯ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಆದರೆ ಕಸವನ್ನು ವಿಲೇವಾರಿ ಮಾಡುತ್ತಿಲ್ಲ. ನಗರಭಾಗದಲ್ಲಿ ಸಿಸಿಟಿವಿಗಳನ್ನು ತುರ್ತು ಅಳವಡಿಸಬೇಕು. ಮಣಿಪಾಲ ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆಯಿದ್ದು, ಈ ಬಗ್ಗೆ ಗಮನಹರಿಸಬೇಕು. ಸ್ಮಾರ್ಟ್ ಸಿಟಿಯ ಸಿಗ್ನಲ್ ಲೈಟ್ ಅಳವಡಿಸುವ ಕಂಬಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಸುಬ್ರಹ್ಮಣ್ಯ ನಗರ ವಾರ್ಡ್ನಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ 75ಕ್ಕೂ ಅಧಿಕ ಬಾವಿ ನೀರು ಕಲುಷಿತಗೊಂಡಿದ್ದು, ಇದು ಕುಡಿಯಲು ಅಯೋಗ್ಯ ಎಂಬ ವರದಿ ಬಂದಿದೆ. ಒಳಚರಂಡಿ ಸಮಸ್ಯೆ ನಿವಾರಣೆಗೆ ನಗರಸಭೆ ಏನು ಕ್ರಮಕೈಗೊಂಡಿದೆ ಎಂದು ಸದಸ್ಯೆ ಜಯಂತಿ ಕೆ.ಪೂಜಾರಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒಳಚರಂಡಿಯನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಜಾಗ ತೆರವು ಮಾಡಿದ ಪರಿಣಾಮ ಕಿನ್ನಿಮೂಲ್ಕಿ ವಾರ್ಡ್ನ 10ಕ್ಕೂ ಅಧಿಕ ಮನೆಗಳಿಗೆ ಹಲವು ವರ್ಷಗಳಿಂದಲೂ ರಸ್ತೆ ಸಂಪರ್ಕವೇ ಇಲ್ಲ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸದಸ್ಯ ವಿಜಯ ಕೊಡವೂರು ಮಾತನಾಡಿ, ಒಳಚರಂಡಿ ಸಮಸ್ಯೆಯಿಂದಾಗಿ ನಗರದ 520ಕ್ಕೂ ಅಧಿಕ ಬಾವಿ ನೀರು ಕಲುಷಿತಗೊಂಡಿದೆ. ಎಸ್ಟಿಪಿ ಪ್ರಕ್ರಿಯೆ ಪಾಲನೆಯಾಗುತ್ತಿಲ್ಲ. ತ್ಯಾಜ್ಯ ನೀರು ಬಿಡುವ ಪ್ರಕ್ರಿಯೆ ಪುನರಾವರ್ತನೆಯಾಗುತ್ತಿದೆ ಎಂದರು. ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಎಲ್ಲ ವಾರ್ಡ್ಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದು, ಇನ್ನು ಕೂಡ ಪರಿಣಾಮಕಾರಿಯಾಗಿ ನಡೆದಿಲ್ಲ. ಮಳೆಯ ನಡುವೆ ರೋಗ ರುಜಿನಗಳು ಉಂಟಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
ನಗರಸಭೆಯಲ್ಲಿ ಎಲ್ಲ ವ್ಯವಹಾರಗಳು ಇ&ಆಫೀಸ್ ಮೂಲಕ ನಡೆಯಲಿದ್ದು, ಈ ಪ್ರಕ್ರಿಯೆ 15 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಇದಕ್ಕೆ ಅಗತ್ಯ ಸಿದ್ಧತೆ ನಡೆಯುತ್ತಿದ್ದು, ಕಡಿಮೆ ಸಿಬ್ಬಂದಿ ಹೆಚ್ಚುವರಿ ಕೆಲಸ ನಿರ್ವಹಿಸಲು ಸಾಧ್ಯವಾಗುವ ಕಾರಣ ಜನರಿಗೂ ಅನುಕೂಲವಾಗಲಿದೆ. ಮಹಾಂತೇಶ ಹಂಗರಗಿ, ಪೌರಾಯುಕ್ತ