ಜಿಲ್ಲೆ

ಚರಂಡಿಗೆ ತ್ಯಾಜ್ಯ ನೀರು ಬಿಡುವವರ ವಿರುದ್ಧ ಬಿಗಿಕ್ರಮ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮಣಿಪಾಲ ಭಾಗದಲ್ಲಿ ಒಳಚರಂಡಿಗೆ ಕೊಳಚೆ ನೀರು ಬಿಡುವ ಹೋಟೆಲ್​, ಅಪಾರ್ಟ್​ಮೆಂಟ್​ ವಿರುದ್ಧ ಬಿಗಿಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ನಡೆಯಿತು. ವಿಜಯವಾಣಿ ವರದಿ ಪ್ರಸ್ತಾಪಿಸಿದ ಸದಸ್ಯ ಅಶೋಕ್​ ನಾಯ್ಕ, ಮಣಿಪಾಲ, ಇಂದ್ರಾಳಿ ಭಾಗದಲ್ಲಿ ಹೋಟೆಲ್​, ಅಪಾರ್ಟ್​ಮೆಂಟ್​ಗಳಿಂದ ಕೊಳಚೆ ನೀರನ್ನು ಒಳಚರಂಡಿಗೆ ಬಿಡಲಾಗುತ್ತಿದ್ದು, ಇದರಿಂದ ಬಾವಿ ನೀರು ಹಾಳಾಗುತ್ತಿದೆ. ನಗರಸಭೆ ಅಧಿಕಾರಿಗಳು ನೋಟಿಸ್​ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಧ್ಯಕ್ಷರೇ ಖುದ್ದಾಗಿ ಕಾರ್ಯಾಚರಣೆ ನಡೆಸಬೇಕು. ವ್ಯಾಪಾರ ಮತ್ತು ವಾಸ್ತವ್ಯ ಪರವಾನಿಗೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ನಗರಸಭೆಯ ಸಹಾಯಕ ಅಭಿಯಂತರ ದುರ್ಗಾಪ್ರಸಾದ್​ ಉತ್ತರಿಸಿ, ಈಗಾಗಲೇ ಕೆಲವು ಹೋಟೆಲ್​, ಅಪಾರ್ಟ್​ ಮೆಂಟ್​ಗಳಿಗೆ ನೋಟಿಸ್​ ಜಾರಿಗೊಳಿಸಿ, 25 ಸಾವಿರ ದಂಡ ವಿಧಿಸಲಾಗಿದೆ. ಕೊಳಚೆ ನೀರಿನ ಪೈಪ್​ಗೆ ಎಂಡ್​ ಕ್ಯಾಪ್​ ಹಾಕಿದರೂ ಪ್ರಯೋಜವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರಿದರೆ ನೀರಿನ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ತಿಳಿಸಿದರು.

ವಿಪಕ್ಷ ನಾಯಕ ರಮೇಶ್​ ಕಾಂಚನ್​ ಮಾತನಾಡಿ, ಮಳೆಗಾಲ ಆರಂಭ ಆಗುತ್ತಿದೆ. ಮುಂಜಾಗೃತ ಕ್ರಮವಾಗಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕಡಿಯಬೇಕು. ನಗರದ ಪ್ರಮುಖ ಜಂಕ್ಷನ್​ ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ತೋಡುಗಳ ಹೂಳೆತ್ತಬೇಕು. ಡಿವೈಡರ್​ ಗಳಿಗೆ ಹಾಕಿರುವ ಹೊರ್ಡಿಂಗ್ಸ್​ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪರಿಸರ ಅಭಿಯಂತರೆ ಸ್ನೇಹ ಅವರು, ಈಗಾಗಲೇ 50 ಮಂದಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಅವರು ಚರಂಡಿ ತೋಡುಗಳ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಡಿವಿಜನ್​ ಗೆ 15 ಮಂದಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.

ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ

ಸದಸ್ಯ ಕೃಷ್ಣರಾಜ ಕೊಡಂಚ ಮಾತನಾಡಿ, ಚಿಟ್ಪಾಡಿ ವಾರ್ಡ್​ನಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದ್ದು, ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ತೋಡಿನಲ್ಲಿರು ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಯಶ್ಪಾಲ್​ ಸುವರ್ಣ ಮಾತನಾಡಿ, ಅಕ್ರಮ ಕಟ್ಟಡದ ಬಗ್ಗೆ ಹಿಂದಿನ ಪೌರಾಯುಕ್ತರು ಇಂಜಿನಿಯರ್​ಗಳ ವರದಿಯನ್ನು ಪಡೆಯದೆ ಕೋರ್ಟ್​ಗೆ ತಪು$್ಪ ಮಾಹಿತಿ ನೀಡಿದ್ದಾರೆ. ವಸತಿ ಪ್ರದೇಶದಲ್ಲಿ ವಾಣಿಜ್ಯ ಬಳಕೆ ಕಟ್ಟಡ ನಿರ್ಮಾಣವಾಗುತ್ತಿದೆ. ರಾಜಕಾಲುವೆ ಬಳಿ 3 ಮೀಟರ್​ ಸೆಟ್​ ಬ್ಯಾಕ್​ ಬಿಟ್ಟಿಲ್ಲ. ಹೀಗಾಗಿ ಅಧಿಕಾರಿಗಳು ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಮಣ್ಣಪಳ್ಳ ನಗರಸಭೆಗೆ ಒಪ್ಪಿಸಿ

ಶಾಸಕ ಯಶ್​ ಪಾಲ್​ ಸುವರ್ಣ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿರುವ ಮಣ್ಣಪಳ್ಳ ಕೆರೆ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಕ್ಕೆ ನಮ್ಮ ವಿರೋಧವಿದೆ. ಸಿಎಸ್​ ಆರ್​ ಫಂಡ್​ ನಲ್ಲಿ ಅಭಿವೃದ್ಧಿ ಮಾಡಬಹುದು. ಆದರೆ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಂತಿಲ್ಲ. ಪಾರ್ಕ್​, ಮೈದಾನ, ಕೆರೆಯ ನಿರ್ವಹಣೆಯ ಹೊಣೆಯನ್ನು ನಗರಸಭೆಗೆ ನೀಡಬೇಕು. ಇದರಿಂದ ಕೇಂದ್ರ ಸರ್ಕಾರದಿಂದ ನೇರ ಅನುದಾನ ಪಡೆಯಲು ಸಾಧ್ಯವಾಗುತ್ತದೆ ಎಂದರು. ಉಪಾಧ್ಯೆ ರಜನಿ ಹೆಬ್ಬಾರ್​, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಪೌರಾಯುಕ್ತ ಡಾ. ಉದಯ್​ ಶೆಟ್ಟಿ ಉಪಸ್ಥಿತರಿದ್ದರು.