ಜಿಲ್ಲೆ

ನಿರ್ವಹಣೆಯಿಲ್ಲದ ಸಿಟಿ ಬಸ್ ನಿಲ್ದಾಣ

Udupi

ಉಡುಪಿ: ನಗರದ ಖಾಸಗಿ ಸಿಟಿ ಬಸ್ ನಿಲ್ದಾಣ ಸರಿಯಾದ ನಿರ್ವಹಣೆ ಇಲ್ಲದೆ ಪ್ರಯಾಣಿಕರಿಗೆ ಇದ್ದೂ ಇಲ್ಲದಂತಾಗಿದೆ. ಸಿಟ್‌ಬೆಂಚ್‌ಗಳು ತುಂಡಾಗಿ ಬಿದ್ದಿದ್ದು, ಹಲವು ತಿಂಗಳೇ ಕಳೆದಿವೆ. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು ಕುಳೀತುಕೊಳ್ಳುವ ಕಟ್ಟೆಯ ಇಂಟರ್‌ಲಾಕ್ ಮತ್ತು ಮಣಿಪಾಲ ಕಡೆಗೆ ಸಾಗುವ ಸಿಟ್ ಬೆಂಚ್ ತುಂಡಾಗಿ ಬಿದ್ದಿದೆ. ಉಡುಪಿ ಸಿಟಿ ಬಸ್ಸುಗಳು ಉತ್ತಮ ಸಾರಿಗೆ ಸೇವೆಗೆ ಹೆಸರು ಪಡೆದಿದೆ. ನಗರ ಬಸ್ ನಿಲ್ದಾಣದಿಂದ ನಗರ ಮತ್ತು ಗ್ರಾಮೀಣ ಭಾಗಗಳಿಗೆ 80ಕ್ಕೂ ಅಧಿಕ ಬಸ್ಸುಗಳು ಸಂಚರಿಸುತ್ತವೆ. ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಪಡುವಂತಾಗಿದೆ ಎಂದು ಪ್ರಯಾಣಿಕರು, ಬಸ್ಸಿನ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಂಡಾದ ಸಿಟ್‌ಬೆಂಚ್: ಮಣಿಪಾಲ ಕಡೆಗೆ ಸಾಗುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸಿಟ್‌ಬೆಂಚ್ ತುಂಡಾಗಿ ಬಿದ್ದಿದೆ. ಇತರೆ ಸಿಟ್‌ಬೆಂಚ್‌ಗಳೂ ತಳದಲ್ಲಿ ತುಕ್ಕು ಹಿಡಿದು ತುಂಡಾಗುವ ಹಂತದಲ್ಲಿದೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲದೆ ಸಮಸ್ಯೆಯಾಗುತ್ತಿದೆ. ಈಗಾಗಲೆ ತುಕ್ಕು ಹಿಡಿದ ಸಿಟ್‌ಬೆಂಚ್‌ಗಳು ಯಾರಾದರು ಪ್ರಯಾಣಿಕರು ಕುಳಿತಿದ್ದಾಗ ತುಂಡಾಗಿ ಬಿದ್ದರೆ ಕೈ,ಕಾಲು ಮುರಿದುಕೊಳ್ಳಬೇಕಾಗುತ್ತದೆ. ಕೂಡಲೆ ದುರಸ್ತಿಗೊಳಿಸಿ ಸರಿ ಪಡಿಸಿ ಎಂಬುದು ಪ್ರಯಾಣಿಕರ ಒತ್ತಾಯಿಸುತಿದ್ದಾರೆ. ಬಸ್‌ನಿಲ್ದಾಣದಲ್ಲಿ ಐದು ಶೆಲ್ಟರ್‌ಗಳಿದ್ದು, ಕಟ್ಟೆಯ ಇಂಟರ್‌ಲಾಕ್‌ಗಳು ಒಂದೊಂದೆ ಕಿತ್ತು ಹೋಗುತ್ತಿವೆ.

ಸ್ವಚ್ಛತೆಗೆ ಸೆಕ್ಯೂರಿಟಿ ಗಾರ್ಡ್: ನಿಲ್ದಾಣ ಸ್ವಚ್ಛತೆಗೆ ಸಿಟಿ ಬಸ್ ಮಾಲೀಕರು ಮತ್ತು ಚಾಲಕರು, ನಿರ್ವಾಹಕರು ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ನಿಲ್ದಾಣದಲ್ಲಿ ಎಂಜಲು, ಗುಟ್ಕ್ಕಾ, ಬೀಡಾ ತಿಂದು ಉಗುಳುವವರನ್ನು, ಕಸ ಬಿಸಾಡುವವರನ್ನು ನಿಯಂತ್ರಿಸಲು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿಯಲ್ಲಿ ನೌಕರರ ಸಂಘದ ನೌಕರ ಸಂಘದವರು, ದಾನಿ ಜಯಕರ ಶೆಟ್ಟಿ ಇಂದ್ರಾಳಿ ಅವರ ನೆರವು ಪಡೆದು ಸೆಕ್ಯುರಿಟಿಗಾರ್ಡ್ ಒಬ್ಬರನ್ನು ನೇಮಿಸಿದ್ದಾರೆ. ಈ ಸೆಕ್ಯುರಿಟಿಗಾರ್ಡ್ ಬಸ್ ನಿಲ್ದಾಣ ಸುತ್ತಾಡುತ್ತ ಸೂಚನೆ ಕೊಡುತ್ತ ಇರುತ್ತಾರೆ. ಇತ್ತೀಚೆಗೆ ಗುಟ್ಕಾ ತಿಂದು ಉಗುಳಿದ ವ್ಯಕ್ತಿಯಿಂದಲೇ ಅದನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. ಕಸ ಎಸೆಯಲು ಅಲ್ಲಲ್ಲಿ ಡಸ್ಟ್‌ಬಿನ್ (ಒಣ ಕಸ-ಹಸಿ ಕಸ ಪ್ರತ್ಯೇಕ), ಉಗುಳಲು ಸಿಮೆಂಟ್ ಚೆಟ್ಟಿ ಇರಿಸಲಾಗಿದೆ.

ಸಿಟಿ ಬಸ್ ನಿಲ್ದಾಣ ನಿರ್ವಹಣೆ ಜವಾಬ್ಧಾರಿ ನಗರಸಭೆ ವ್ಯಾಪ್ತಿಗೆ ಸಂಬಂಧಿಸಿಲ್ಲ. ಇದನ್ನು ನಿರ್ವಹಣೆ ಮಾಡುವವರ ಬಳಿಯೇ ಕೇಳಬೇಕು.

- ಆನಂದ್ ಸಿ.ಕಲ್ಲೋಳಿಕರ್, ಪೌರಾಯುಕ್ತ, ಉಡುಪಿ ನಗರಸಭೆ

ಬಸ್ ನಿಲ್ದಾಣದಲ್ಲಿ ಒಂದು ಬೆಂಚ್ ಮುರಿದು ಬಿದ್ದು ಹಲವು ತಿಂಗಳಾಗಿವೆ. ಸಂಬಂದ ಪಟ್ಟವರು ಕೂಡಲೆ ದುರಸ್ತಿಗೊಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನೂತನ ಬೆಂಚುಗಳನ್ನು ಅಳವಡಿಸಬೇಕು. ಬೇಸಿಗೆ ಪ್ರಖರತೆ ಹೆಚ್ಚುತ್ತಿದ್ದು ಕುಡಿಯುವ ನೀರು, ನೆರಳಿನ ವ್ಯವಸ್ಧೆ ಕಲ್ಪಿಸಿ.

- ರಾಘವೇಂದ್ರ ನಾಯಕ್, ನಲ್ಲೂರು, 80 ಬಡಗಬೆಟ್ಟು, ಪರ್ಕಳ

ಸಿಟಿ ಬಸ್ ನಿಲ್ದಾಣದಿಂದ ನಗರಸಭೆಗೆ ಶುಲ್ಕ ಪಾವತಿಯಾಗುತ್ತದೆ, ಸಿಟಿ ಬಸ್ ನಿಲ್ದಾಣದ ನಿರ್ವಹಣೆ, ಮೂಲಸೌಲಭ್ಯ ಒದಗಿಸುವುದು ನಗರಸಭೆ ಜವಾಬ್ಧಾರಿ.

- ಕುಯ್ಲಡಿ ಸುರೇಶ್ ನಾಯಕ್, ಅಧ್ಯಕ್ಷ ಉಡುಪಿ ಸಿಟಿ ಬಸ್ಸು ಮಾಲೀಕರ ಸಂಘ

ಉಡುಪಿ, ಮಣಿಪಾಲ ಖಾಸಗಿ ಸಿಟಿ ಬಸ್ಸು ನಿಲ್ದಾಣ 3 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಆಗುತ್ತದೆ ಎನ್ನಲಾಗಿತ್ತು, ಈ ಬಗ್ಗೆ ಏನು ಬೆಳವಣಿಗೆಯಾಗಿದೆ ಎಂದು ತಿಳಿದಿಲ್ಲ. ನಿಲ್ದಾಣದ ಸ್ವಚ್ಛತೆ ವಿಚಾರದಲ್ಲಿ ಎಲ್ಲ ನೌಕರರು ಕಾಳಜಿವಹಿಸಿದ್ದೇವೆ. ಮೊದಲು ತುಂಡಾಗಿರುವ ಸಿಟ್‌ಬೆಂಚ್, ಇಂಟರ್‌ಲಾಕ್ ಸರಿಪಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.

ರಾಬರ್ಟ್ ಪಾಸ್ ವಗ್ಗ, ಪ್ರಧಾನ ಕಾರ್ಯದರ್ಶಿ, ಉಡುಪಿ ಸಿಟಿ ಬಸ್ಸು ನೌಕರರ ತುರ್ತು ಸೇವಾ ಸಂಘ