ಜಿಲ್ಲೆ

ಉಡುಪಿ ಮಗು ಅಪಹರಣ ಪ್ರಕರಣ ಕುಮಟಾದಲ್ಲಿ ಮಗುವಿನ ರಕ್ಷಣೆ, ಆರೋಪಿ ವಶಕ್ಕೆ

udupireporter

ಉಡುಪಿ: ಕರಾವಳಿ ಬೈಪಾಸ್ ಸಮೀಪ ಭಾನುವಾರ ಬೆಳಗ್ಗೆ ಅಪಹರಣಕ್ಕೆ ಒಳಗಾದ ಮಗುವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಾಗಲಕೋಟೆ ಪರಶು ಎಂಬಾತನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸ್ಥಳಿಯ ಪೊಲೀಸರ ಸಹಕಾರದೊಂದಿಗೆ ಭಾನುವಾರ ರಾತ್ರಿ ವಶಕ್ಕೆ ಪಡೆದುಕೊಳ್ಳಲಾಯಿತು. ಮಗು ಶಿವರಾಜ್ (2.4 ವರ್ಷ) ಮತ್ತು ಆರೋಪಿಯನ್ನು‌ ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿದ್ದಾರೆ.

ಪರಶು ಎಂಬಾತ ಬೆಳಗ್ಗೆ ಕರಾವಳಿ ಬೈಪಾಸ್ ನಿಂದ ಸಿಟಿಬಸ್ ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದ. ಸಂತೆಕಟ್ಟೆಯಲ್ಲಿ ಮಗುವಿನೊಂದಿಗೆ ಕೆಂಪು ಬಣ್ಣದ ಬಸ್ ಹತ್ತಿರುವುದಾಗಿ ಮಹಿಳೆಯೊಬ್ಬರು ನೀಡಿದ ಮಾಹಿತಿಯಂತೆ ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿ ವಿವಿಧ ತಂಡಗಳಿಂದ ಕಾರ್ಯಚರಣೆಗಿಳಿಯಲಾಗಿತ್ತು.ಆತ ಹತ್ತಿರುವ ಬಸ್ ಪತ್ತೆ ಹಚ್ಚಿದ ತಂಡ, ಬಸ್ ನಿರ್ವಾಹಕ ನನ್ನು ಸಂಪರ್ಕಿಸಿತು. ಆತ ತಿಳಿಸಿರುವಂತೆ ಆರೋಪಿ ಮಗುವಿನೊಂದಿಗೆ ಭಟ್ಕಳದಲ್ಲಿ ಇಳಿದಿದ್ದ. ಬಳಿಕ ಪೊಲೀಸರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಭಟ್ಕಳ, ಕುಮಟಾ ಸೇರಿದಂತೆ ಕರಾವರ ಪೊಲೀಸರು ಹುಡುಕಾಟ ಆರಂಬಿಸಿದರು. ರಾತ್ರಿ ವೇಳೆ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು ಎಂದು ಪೊಲೀಸ್ ಮೂಲ ತಿಳಿಸಿದೆ.

ಆರೋಪಿ ಬಾಗಲಕೋಟೆ ದಂಪತಿಯ ಮಗುವನ್ನು‌ ಭಾನುವಾರ ಬೆಳಗ್ಗೆ ಅಪಹರಣ ಮಾಡಿರುವುದಾಗಿ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು.